ಬಂಟ್ವಾಳ, ಡಿ 03(DaijiworldNews//DB): ದ.ಕ. ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯ ಗ್ರಾಮ ನೈರ್ಮಲ್ಯ ಹಾಗೂ ಶುಚಿತ್ವ ಕಾಪಾಡುವ ದೃಷ್ಟಿಯಿಂದ ಶಾಲಾ-ಕಾಲೇಜು, ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಭಾಗವಹಿಸುವಿಕೆಯಲ್ಲಿ ಮುಂದಿನ ದಿನಗಳಲ್ಲಿ ತಿಂಗಳ ಮೊದಲ ಶನಿವಾರ ನಡೆಯಲಿರುವ ಸ್ವಚ್ಛ ಶನಿವಾರ ಅಭಿಯಾನದ ಜಿಲ್ಲಾ ಮಟ್ಟದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಪುದು ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಶನಿವಾರ ಫರಂಗಿಪೇಟೆಯಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಯು.ಟಿ. ಖಾದರ್ ಮಾತನಾಡಿ, ಸ್ವಚ್ಛತೆಯನ್ನು ಪಂಚಾಯತ್ನವರೇ ಮಾಡಬೇಕು ಎಂದು ಕಾಯದೆ ಪ್ರತಿ ಮನೆಯವರು ಕೂಡ ಇದು ನಮ್ಮ ಜವಾಬ್ದಾರಿ ಎಂದು ತಿಳಿದುಕೊಂಡಾಗ ಮಾತ್ರ ಸ್ವಚ್ಛ ಪರಿಸರ ಸೃಷ್ಟಿಯಾಗುತ್ತದೆ. ಪ್ರತಿ ಅಂಗಡಿಗಳ ಮುಂದೆಯೂ ಹಸಿ, ಒಣ ಕಸದ ತೊಟ್ಟಿಗಳನ್ನು ಇಡುವ ಕಾರ್ಯ ಅತಿ ಅಗತ್ಯವಾಗಿದ್ದು, ಕಸದಿಂದ ಆದಾಯವನ್ನು ಗಳಿಸುವ ಅವಕಾಶವೂ ಇದೆ ಎಂದರು.
ಜಿಲ್ಲಾ ಪಂಚಾಯತ್ ಸಿಇಒ ಡಾ. ಕುಮಾರ್ ಮಾತನಾಡಿ, ಸ್ವಚ್ಛತಾ ಕಾರ್ಯ ಮಾತಿನ ಮೂಲಕ ನಡೆಯದೆ ಕ್ರಿಯೆಯಲ್ಲೂ ಆಗಬೇಕಿದೆ. ಸ್ವಚ್ಛ ಮನಸ್ಸುಗಳಿಂದ ಸ್ವಚ್ಛ ಪರಿಸರ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅಧ್ಯಕ್ಷತೆ ವಹಿಸಿದ್ದರು. ಪುದು ಪಂಚಾಯತ್ನ ಕಸ ಸಂಗ್ರಹ ವಾಹನಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಸದಸ್ಯರಾದ ಮನೋಜ್ಕುಮಾರ್ ನಾಣ್ಯ, ಭಾಸ್ಕರ್ ರೈ, ಹುಸೇನ್ ಪಾಡಿ, ರಝಾಕ್ ಅಮ್ಮೆಮಾರ್, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಹರೀಶ್ ಕೆ.ಎ. ಸ್ವಾಗತಿಸಿದರು. ಹನೀಫ್ ಗೋಳ್ತಮಜಲು ನಿರೂಸಿದರು.