ಕಾರ್ಕಳ, ಡಿ 03(DaijiworldNews//DB): ವಿಧಾನ ಸಭಾ ಕ್ಷೇತ್ರ ವಿವಿಧ ಆಯಾಮಗಳಲ್ಲಿ ಅಭಿವೃದ್ದಿ ಹೊಂದುತ್ತಿದ್ದು, ಇದೀಗ 2.50 ಕೋಟಿ ರೂ. ವೆಚ್ಚದಲ್ಲಿ ಕಾರ್ಕಳ ತಾಲೂಕು ಪಂಚಾಯತ್ನ ನೂತನ ಕಚೇರಿ ಕಟ್ಟಡ ಉದ್ಘಾಟನೆಗೊಂಡಿದೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ತಾಲೂಕು ಪಂಚಾಯತ್ನ ನೂತನ ಕಚೇರಿ ಕಟ್ಟಡ ಹಾಗೂ ವಿಶೇಷ ಚೇತನರ ನೂತನ ವಾಣಿಜ್ಯ ಸಂಕೀರ್ಣ ಕಟ್ಟಡದ ಉದ್ಘಾಟನೆ ನೆರವೇರಿಸಿ ಶನಿವಾರ ಮಾತನಾಡಿದರು.
ತಾಲೂಕು ಪಂಚಾಯತ್ನಲ್ಲಿ ಹತ್ತಾರು ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿದ್ದು, ಅದಕ್ಕೆ ಪೂರಕ ಎಂಬಂತೆ ಈ ಕಟ್ಟಡದ ರಚನೆಯಾಗಿದೆ. ಹೆಬ್ರಿ ತಾ.ಪಂ. ಕಟ್ಟಡಕ್ಕೆ 1.50 ಕೋಟಿ ರೂ. ಮಂಜೂರಾಗಿದ್ದು, ಈ ತಿಂಗಳಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ಜತೆಗೆ ಅಜೆಕಾರು ಗ್ರಾಮ ಕರಣಿಕರ ಕಚೇರಿ, ಶಿಕ್ಷಣ ಇಲಾಖೆ ಕಚೇರಿ, ವನ್ಯಜೀವಿ ವಿಭಾಗದ ಕಚೇರಿಗಳು ನಿರ್ಮಾಣಗೊಂಡಿದ್ದು, ಸರಕಾರಿ ಸೇವೆಗಳು ಜನತೆಗೆ ಸುಲಲಿತವಾಗಿ ಸಿಗುವಂತಾಗಬೇಕು ಎಂದರು.
ಪುರಸಭೆ ಅಧ್ಯಕ್ಷೆ ಸುಮ ಕೇಶವ್, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ಪ್ರಭಾರ ತಹಸೀಲ್ದಾರ್ ಪುರಂದರ, ಕಾರ್ಕಳ ತಾ.ಪಂ. ಆಡಳಿತಾಧಿಕಾರಿ ಪ್ರತಿಭಾ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಗುರುದತ್ ಎಂ.ಎನ್., ಹೆಬ್ರಿ ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ಶಶಿಧರ್, ಪುರಸಭೆ ಮುಖ್ಯಾಧಿಕಾರಿ ರೂಪಾ ಜಿ. ಶೆಟ್ಟಿ, ಕುಕ್ಕುಂದೂರು ಗ್ರಾ.ಪಂ.ಅಧ್ಯಕ್ಷೆ ಶಶಿಮಣಿ ಉಪಸ್ಥಿತರಿದ್ದರು.
94ಸಿ ಅಡಿಯಲ್ಲಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ನಡೆಯಿತು. ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು.