ಉಡುಪಿ, ಡಿ 03(DaijiworldNews//DB): ಉಡುಪಿಯ ಕಟಪಾಡಿಯಲ್ಲಿ ಶುಕ್ರವಾರ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಸುಶಿಕ್ಷಿತ್ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದರೂ, ಯಾರೊಬ್ಬರೂ ಹತ್ತಿರಕ್ಕೆ ಬಂದು ಸಹಾಯ ಮಾಡಿಲ್ಲ. ಜನ ಮಾನವೀಯತೆ ಮರೆತು ದೂರದಿಂದಲೇ ಮೌನವಾಗಿ ನೋಡುತ್ತಿದ್ದರು ಎನ್ನಲಾಗಿದೆ.
ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ನ ಸಹಸವಾರ ಸುಶಿಕ್ಷಿತ್ (20) ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದರು. ಸಹಾಯಕ್ಕೆ ಬರುವಂತೆ ಅಲ್ಲಿದ್ದವರಿಗೆಲ್ಲಾ ಸುಶಿಕ್ಷಿತ್ನ ಇಬ್ಬರು ಗೆಳೆಯರು ಮನವಿ ಮಾಡಿದರೂ, ಯಾರೊಬ್ಬರೂ ಸಹಾಯಕ್ಕೆ ಬಂದಿರಲಿಲ್ಲ ರಿಕ್ಷಾವನ್ನಾದರೂ ಕರೆ ತನ್ನಿ ಎಂದರೂ ಜನ ಸುಮ್ಮನೇ ನಿಂತಿದ್ದರು. ಇನ್ನು ಪೊಲೀಸರು ಕೂಡಾ ಸ್ಥಳದಲ್ಲೇ ಇದ್ದರೂ ಹತ್ತಿರಕ್ಕೆ ಬಂದಿರಲಿಲ್ಲ ಎನ್ನಲಾಗಿದೆ.
ಗಾಯಾಳು ಗೆಳೆಯನನ್ನು ಕೈಯಲ್ಲಿ ಹಿಡಿದುಕೊಂಡು ಇನ್ನಿಬ್ಬರು ಗೆಳೆಯರು ಆಕ್ರಂದಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕರುಳು ಹಿಂಡುವಂತಿದೆ. ಸಾಕಷ್ಟು ಸಮಯದ ಬಳಿಕ ಆಟೋವೊಂದು ಸಿಕ್ಕಿದ್ದು, ಅದರಲ್ಲಿ ಗಾಯಾಳು ಸ್ನೇಹಿತನನ್ನು ಇತರ ಇಬ್ಬರು ಸ್ನೇಹಿತರು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆತನನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ ಗೆಳೆಯರು.