ಸುಳ್ಯ, ಡಿ 03(DaijiworldNews/MS): ನೀರು ಕೇಳುವ ನೆಪದಲ್ಲಿ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ವಯೋವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರ ವಿಶೇಷ ತಂಡ ಬಂಧಿಸಿದ್ದಾರೆ.
ಮೂಲತಃ ಮಡಿಕೇರಿ ನಾಪೋಕ್ಲು ಕಕ್ಕಬೆ ಕುಂಜಿಲ ನಿವಾಸಿ ಪ್ರಸ್ತುತ ಕಾಸರಗೋಡು ಹೊಸದುರ್ಗ ನಿವಾಸಿ ಸಲೀಂ ಪಿ.ಎ. ಬಂಧಿತ ಆರೋಪಿ.
ನವಂಬರ್ 28ರಂದು ಸುಳ್ಯ ತಾಲೂಕು ಬೈತಡ್ಕ ನಿವಾಸಿ ಕಮಲ ಅಟ್ಕಾರ್ ಎಂಬವರ ಮನೆಗೆ ನೀರು ಕೇಳುವ ನೆಪದಲ್ಲಿ ಅಕ್ರಮ ಪ್ರವೇಶ ಮಾಡಿದ ಆರೋಪಿ ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಳವುಗೈದು ಪರಾರಿಯಾಗಿದ್ದ ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯನ್ನು ಪೊಲೀಸರ ವಿಶೇಷ ತಂಡ ಕಾಸರಗೋಡು ತಾಲೂಕಿನ ದೇಲಂಪಾಡಿ ಗ್ರಾಮದ ಕೋಟ್ಯಾಡಿ ಎಂಬಲ್ಲಿಂದ ವಶಕ್ಕೆ ಪಡೆದಿದ್ದು ಆತನಿಂದ 10.850 ಗ್ರಾಂ ಚಿನ್ನದ ಸರದ ತುಂಡು ಹಾಗೂ ಕೃತ್ಯಕ್ಕೆ ಬಳಸಿದ 95,000 ಮೌಲ್ಯದ ಮೋಟಾರು ಸೈಕಲ್ ಸ್ವಾಧೀನಪಡಿಸಲಾಗಿದೆ.
ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.