ಮಣಿಪಾಲ, ಡಿ 03 (DaijiworldNews/HR): ಮಾಹೆಯ ಅಡ್ಮಿಶನ್ ವಿಭಾಗದ ನಿರ್ದೇಶಕರಾದ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ(ಎಮ್ಐಟಿ) ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ, ಡಾ. ಪಿ. ಗಿರಿಧರ್ ಕಿಣಿ ಅವರು ಮಾಹೆ ಮಣಿಪಾಲದ ನೂತನ ರಿಜಿಸ್ಟ್ರಾರ್(ಕುಲಸಚಿವ) ಆಗಿ ನೇಮಕಗೊಂಡಿದ್ದು ಡಿ. 01 ರಿಂದ ಹುದ್ದೆ ಸ್ವೀಕರಿಸಿದ್ದಾರೆ.
ಬಿ.ಇ. ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ (1995 ) ಮತ್ತು ಎಂ.ಟೆಕ್(1998) ಮತ್ತು ಪಿಎಚ್ ಡಿ ಪದವಿದರರಾದ ಡಾ. ಪಿ. ಗಿರಿಧರ್ ಕಿಣಿ ಅವರು 1999ರಲ್ಲಿ ತಾವು ಓದಿದ ಸಂಸ್ಥೆ ಎಮ್ಐಟಿ ಮಣಿಪಾಲದಲ್ಲಿಯೇ ಉಪನ್ಯಾಸಕ ವೃತ್ತಿಯನ್ನು ಆರಂಭಿಸಿ ಅಂದಿನಿಂದ ಮಾಹೆಯಲ್ಲಿ ವಿವಿಧ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2012 ರಿಂದ ಮಣಿಪಾಲ್ ವಿಶ್ವವಿದ್ಯಾನಿಲಯ ಜೈಪುರದಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗ, ಸ್ಕೂಲ್ ಆಫ್ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.
2013 ರಿಂದ ಡಿಸೆಂಬರ್ 2017 ರವರೆಗೆ ಎಮ್ಐಟಿ ಮಣಿಪಾಲದ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಸಂಸ್ಥೆಗೆ ಗಣನೀಯ ಸೇವೆ ಸಲ್ಲಿಸಿದ್ದಾರೆ. 2018 ರ ಜನವರಿಯಲ್ಲಿ ಅಡ್ಮಿಶನ್ ವಿಭಾಗದ ನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡ ಅವರು ತಮ್ಮ ಅಧಿಕಾರಾವಧಿಯಲ್ಲಿ, ಪ್ರಕ್ಷುಬ್ಧ ಸಮಯದ ನಡುವೆಯೂ ಮಾಹೆಯ ಅಡ್ಮಿಶನ್ ವಿಭಾಗವು ಉತ್ತಮ ಅಡ್ಮಿಶನ್
ಹೊಂದುವಂತೆ ಕಾರ್ಯನಿರ್ವಹಿಸಿದರು.
ಇನ್ನು ಡಿಸೆಂಬರ್ 1ರಿಂದ ಮಾಹೆಯ ಈಗಿನ ರಿಜಿಸ್ಟ್ರಾರ್ ಆಗಿರುವ ಡಾ ನಾರಾಯಣ ಸಭಾಹಿತ್ ಅವರು ಮಾಹೆಯ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹಕುಲಪತಿಗಳಾಗಿ ಹುದ್ದೆಯನ್ನು ಸ್ವೀಕರಿಸಲಿದ್ದಾರೆ.
ಡಾ ಸಭಾಹಿತ್ ಅವರು ಸೆಪ್ಟೆಂಬರ್ 2015 ರಲ್ಲಿ ಮಣಿಪಾಲದ ಮಾಹೆಯ ರಿಜಿಸ್ಟ್ರಾರ್ ಆಗಿ ನೇಮಕಗೊಂಡು ತಮ್ಮ ಅವಧಿಯಲ್ಲಿ ಅನೇಕ ಜವಾಬ್ದಾರಿಗಳನ್ನು ಪ್ರಶಂಸಾರ್ಹವಾಗಿ ನಿರ್ವಹಿಸಿದ್ದಾರೆ.
ಸಂಸ್ಥೆಯ ಇತರ ನಾಯಕರೊಡಗೂಡಿ ಯಶಸ್ವಿಯಾಗಿ ಯುಜಿಸಿ ಪರಿಶೀಲನೆ, ಐಓಇ ಅಧಿಕಾರಿಗಳ ಸಮಿತಿಯ ಭೇಟಿ ಮತ್ತು ನ್ಯಾಕ್ ತಂಡದ ಭೇಟಿ ಇತ್ಯಾದಿಗಳನ್ನ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.