ಉಡುಪಿ, ಡಿ 03 (DaijiworldNews/HR): ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ತಪ್ಪಿನಿಂದ ಅವೈಜ್ಞಾನಿಕ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಸುರತ್ಕಲ್ ಟೋಲ್ ರದ್ದು ಮಾಡುವ ವೇಗದಲ್ಲಿ ದರ ಹೆಚ್ಚು ಮಾಡಿ ಹೆಜಮಾಡಿ ಮೇಲೆ ವರ್ಗಾಯಿಸಲಾಗಿದೆ. ಶಾಸಕ ರಘುಪತಿ ಭಟ್ ದೆಹಲಿಯಲ್ಲಿ ಮಾತುಕತೆಯನ್ನು ಮಾಡಿದ್ದು, ಮುಂದಿನ ವಾರ ಮುಖ್ಯಮಂತ್ರಿಗಳ ಜೊತೆ ನಾವು ಚರ್ಚೆ ಮಾಡುತ್ತೇವೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಸುರತ್ಕಲ್ ಟೋಲ್ ಹಣವನ್ನು ಹೆಜಮಾಡಿ ಟೋಲ್ ಮೇಲೆ ಹೇರಿರುವ ಕುರಿತು ಉಡುಪಿಯಲ್ಲಿ ಜಿಲ್ಲಾಡಳಿತ ಮಟ್ಟದ ಸಭೆ ನಡೆದಿದ್ದು, ಸಭೆಯಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳು, ಸಚಿವ ಸುನಿಲ್ ಕುಮಾರ್, ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್, ಎಸ್ ಪಿ ಅಕ್ಷಯ್, ಉಡುಪಿಯ ಏಳು ತಾಲೂಕುಗಳ ಅಧಿಕಾರಿಗಳು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಆನ್ ಲೈನ್ ಮೂಲಕ ಟೋಲ್ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುನಿಲ್ ಕುಮಾರ್, ರಾ. ಹೆದ್ದಾರಿ ಅಧಿಕಾರಿಗಳ ತಪ್ಪಿನಿಂದ ಅವೈಜ್ಞಾನಿಕ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಸುರತ್ಕಲ್ ಟೋಲ್ ರದ್ದು ಮಾಡುವ ವೇಗದಲ್ಲಿ ದರ ಹೆಚ್ಚು ಮಾಡಿ ಹೆಜಮಾಡಿ ಮೇಲೆ ವರ್ಗಾಯಿಸಲಾಗಿದೆ. ಶಾಸಕ ರಘುಪತಿ ಭಟ್ ದೆಹಲಿಯಲ್ಲಿ ಮಾತುಕತೆಯನ್ನು ಮಾಡಿದ್ದಾರೆ. ಮುಂದಿನ ವಾರ ಮುಖ್ಯಮಂತ್ರಿಗಳ ಜೊತೆ ನಾವು ಚರ್ಚೆ ಮಾಡುತ್ತೇವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಎರಡು ಪ್ರಸ್ತಾವನೆಗಳನ್ನ ನೀಡುತ್ತೇವೆ ಎಂದರು.
ಇನ್ನು ಉಡುಪಿ ಜಿಲ್ಲೆಯ ಎಲ್ಲಾ ವಾಹನಗಳಿಗೆ ರಿಯಾಯಿತಿ ಕೊಡಬೇಕು. ಹೆಚ್ಚುವರಿ ಟೋಲ್ ಸಂಗ್ರಹ ಮಾಡಬಾರದು ಎಂಬುದು ನಮ್ಮ ಮೊದಲ ಬೇಡಿಯಾಗಿದ್ದು, ಸುರತ್ಕಲ್ ಮೊತ್ತವನ್ನು ಹೇಗೆ ನಿಭಾಯಿಸಬೇಕು ಎಂದು ದೆಹಲಿ ಮಟ್ಟದಲ್ಲಿ ತೀರ್ಮಾನಿಸಬೇಕು. ಹೆಜಮಾಡಿ ಮೇಲೆ ಹೇರದೆ ಯಾವ ರೀತಿ ನಿಭಾಯಿಸ ಬೇಕು ಎಂದು ದೆಹಲಿ ಮಟ್ಟದಲ್ಲಿ ಚರ್ಚೆ ಮಾಡಬೇಕು. ಯಾವುದೇ ಸೂಕ್ತ ನಿರ್ಧಾರವಾಗದೆ ಹೆಚ್ಚುವರಿ ಟೂಲ್ ಸಂಗ್ರಹಿಸಬಾರದು. ಉಸ್ತುವಾರಿ ಸಚಿವ ಅಂಗಾರ ನಾವು ಎಲ್ಲಾ ಶಾಸಕರು ಮುಖ್ಯಮಂತ್ರಿಗಳ ಜೊತೆ, ಲೋಕಸಭಾ ಸದಸ್ಯ ಶೋಭಾ ಕರಂದ್ಲಾಜೆ ಜೊತೆ ಮಾತನಾಡುತ್ತೇವೆ ಎಂದಿದ್ದಾರೆ.
ಸುರತ್ಕಲ್ ಟೋಲ್ ಅಕ್ರಮ ಎಂದು ನಾವು ಯಾವತ್ತೂ ಹೇಳಿಲ್ಲ. 2035 ರವರೆಗೆ ಮಾಡಿದ ಒಪ್ಪಂದದ ದಾಖಲೆಗಳು ಇದೆ. ಸುರತ್ಕಲ್ ನಲ್ಲಿ ನಡೆದ ಒತ್ತಡದ ಕಾರಣಕ್ಕೆ ಪಕ್ಕದ ಹೆಜಮಾಡಿ ಮೇಲೆ ಟೋಲ್ ಹೊರೆ ಹೊರಿಸಲಾಗಿದೆ. ಮಾತುಕತೆ ಆಗುವ ತನಕ ಜನ ನಿರಾಳವಾಗಿ ಇರಬಹುದು. ಟೋಲ್ - ಇದು ಚುನಾವಣೆಯ ವಿಚಾರ ಅಲ್ಲ. ಅಂದು ಮಾಡಿದ ತಪ್ಪುಗಳಿಗೆ ನಾವು ಇಂದು ಬೆನ್ನು ತೋರಿಸುವುದಿಲ್ಲ. 2012 13ರಲ್ಲಿ ಸುರತ್ಕಲ್ ಟೋಲ್ ನ ಪಾಪದ ಕೂಸು ಆರಂಭವಾಗಿದೆ ಎಂದು ಹೇಳಿದ್ದಾರೆ.