ವಿಶೇಷ ಲೇಖನ: ಆರೂರು ಸುಕೇಶ್ ಶೆಟ್ಟಿ, ವಕೀಲರು, ಉಡುಪಿ
ಉಡುಪಿ, ಡಿ 03 (DaijiworldNews/HR): ಸಮಾಜದಲ್ಲಿ ಜನರೊಂದಿಗೆ ಬೆರೆಯುವಲ್ಲಿ ಸುಲಭವಾಗಿ ಲಭ್ಯವಾಗಿರುವುದು ವಕೀಲರು. ಅವರು ಜನರೊಂದಿಗೆ ನಿರಂತರ ಒಡನಾಟವನ್ನು ಹೊಂದಿರುತ್ತಾರೆ. ಸಮಾಜವನ್ನು ತಿದ್ದುವಲ್ಲಿ ವಕೀಲರ ಸಲಹೆ ತುಂಬಾ ಉಪಯುಕ್ತವಾಗಿರುತ್ತದೆ. ಸಮಾಜವನ್ನು ಉತ್ತಮಗೊಳಿಸಲು, ತಿದ್ದುವಲ್ಲಿ ವಕೀಲರು ಮೊದಲಿಗರಾಗಿರುತ್ತಾರೆ. ಕಾನೂನಿನ ಅರಿವನ್ನು ಜನಸಾಮಾನ್ಯರಿಗೆ ಮೂಡಿಸಿದರೆ ಸಮಾಜವು ಉತ್ತಮ ಸ್ವಾಸ್ಥ್ಯದಿಂದ ಕೂಡಿರುತ್ತದೆ. ವಕೀಲರು, ಜನಸಾಮಾನ್ಯರಿಗೆ ಇತ್ತೀಚಿನ ಹೊಸ ಕಾನೂನುಗಳಾದ ಸೈಬರ್ ಪ್ರಕರಣ, ಪೋಕ್ಸೋ ಪ್ರಕರಣ, ಬಾಲ್ಯ ವಿವಾಹ ನಿಷೇಧ ಕಾಯಿದೆ, ಮಕ್ಕಳ ಹಕ್ಕು ಮತ್ತು ರಕ್ಷಣೆ, ಮಹಿಳೆಯರ ಸಂರಕ್ಷಣೆಗಳ ಬಗ್ಗೆ ಹಾಗೂ ಇತರ ಪ್ರಕರಣಗಳ ಬಗ್ಗೆ ಸಮಾಜದಲ್ಲಿ ಅರಿವನ್ನು ಮೂಡಿಸಿದಲ್ಲಿ ಸಮಾಜದಲ್ಲಿ ಅಪರಾಧಗಳನ್ನು ಕಡಿಮೆ ಮಾಡುವಲ್ಲಿ, ಕಾನೂನು ವ್ಯವಸ್ಥೆಯನ್ನು ಕಾಪಾಡುವಲ್ಲಿ ಸಹಕಾರಿಯಾಗಿರುತ್ತದೆ. ವಕೀಲರು ಕಾನೂನು ಸೇವೆಗಳ ಪ್ರಾಧೀಕಾರದ ವತಿಯಿಂದ ನಡೆಸುವ ಲೋಕ ಅದಲಾತ್ನ ಬಗ್ಗೆ ಜನರಿಗೆ ಅರಿವು ಮೂಡಿಸಿದಲ್ಲಿ ಅದರ ಉಪಯೋಗವನ್ನು ಜನರು ಪಡೆಯುವ ಬಗ್ಗೆ ತಿಳಿಸಿದಲ್ಲಿ ಹೆಚ್ಚಿನ ವಿವಿಧ ರೀತಿಯ ಪ್ರಕರಣಗಳು ರಾಜಿ ಸಂದಾನದಲ್ಲಿ ಮುಕ್ತಾಯವಾಗಿ ಸಮಾಜವು ನೆಮ್ಮದಿಯಿಂದ ಇರಲು ಕಾರಣವಾಗುತ್ತದೆ.
ವಕೀಲ ವೃತ್ತಿಯು ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು, ಸಮಾಜದಲ್ಲಿ ಕಾನೂನು ವ್ಯವಸ್ಥೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಮಾಜವು ಸುಗಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಖಾತ್ರಿಪಡೆಸುವಲ್ಲಿ ವಕೀಲರು ರಚಿಸುವ ಪ್ರಮುಖ ಪಾತ್ರ ತುಂಬ ಅಗತ್ಯವಾಗಿದೆ. ಇಂಟರ್ನ್ಯಾಶನಲ್ ಬಿ ಕೈಂಡ್ ಟು ಲಾಯರ್ಸ್ ಡೇ ಎಂದೂ ಕೂಡ ಕರೆಯಲ್ಪಡುವ ವಕೀಲರ ದಿನಾಚರಣೆ, ಕಾನೂನು ಅಭ್ಯಾಸ ಮಾಡುವ ಎಲ್ಲರ ಬಗ್ಗೆ ದಯೆ ತೋರಲು ಜನರನ್ನು ಪ್ರೋತ್ಸಾಹಿಸುತ್ತದೆ ಮತ್ತು ದೇಶದಲ್ಲಿ ಕಾನೂನು ವ್ಯವಸ್ಥೆ ಉತ್ತಮವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.
ವಕೀಲರು ಅತೀ ಹೆಚ್ಚು ಶ್ರಮ ವಹಿಸುವ ಜನರಾಗಿರುತ್ತಾರೆ. ಇತರ ವೃತ್ತಿಗೆ ಹೋಲಿಸಿದರೆ ವಕೀಲರು ಇನ್ನೂ ಹಲವು ಗಂಟೆಗಳ ಕಾ ಜಾಸ್ತಿ ಕೆಲಸವನ್ನು ಮಾಡುತ್ತಿರುತ್ತಾರೆ. ವಕೀಲರು ಪ್ರತಿದಿನ ಕೆಲಸ ಮಾಡಲು ಹೆಚ್ಚಿನ ಸಮಯವನ್ನು ಮೀಸಲಿಡಬೇಕಾಗಿದ್ದರೂ ಸಹ, ವಕೀಲರು ತಮ್ಮ ಕಕ್ಷಿದಾರರಿಗೆ ತಮ್ಮ ಕಾನೂನು ಕಾಳಜಿಗಳೊಂದಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುತ್ತಾರೆ. ವಕೀಲರ ಜ್ಞಾನವು ಇತರ ಜನರ ಜೀವನದ ಮೇಲೆ ಪರಿಣಾಮ ಬೀರುವ ಜ್ಞಾನವಾಗಿದು, ವಕೀಲರಿಗೆ ಹೆಚ್ಚು ಕಷ್ಟಪಟ್ಟು ಕೆಲಸ ಮಾಡಲು ಪ್ರೆರೇಪಿಸುತ್ತದೆ. ವಕೀಲರಿಗೆ ತಮ್ಮ ಜೀವನಶೈಲಿಯೊಂದಿಗೆ ಎಲ್ಲಾ ಸಮಯದಲ್ಲಿಯೂ ಕಾರ್ಯಗಳ ಪಟ್ಟಿಯೊಂದಿಗೆ ಸಮಯವನ್ನು ಕಳೆಯುವ ಬದ್ದತೆ ಉಂಟಾಗಿದೆ. ಹಿಂದಿನ ಕಾಲದಲ್ಲಿ ಲ್ಯಾಂಡ್ಲೈನ್ ಪೋನ್, ಪೋಸ್ಟ್ಕಾರ್ಡ್ಗಳೊಂದಿಗೆ ಮಾತ್ರ ಕಾನೂನಿನ ತುರ್ತು ಸಮಾಲೋಚನೆಗೆ ಕಚೇರಿ ಸಮಯ ಹೊಂದಿಕೊಂಡಿದ್ದರೆ, ಇದೀಗ ತಂತ್ರಜ್ಞಾನದ ಯುಗದಲ್ಲಿ ಕಕ್ಷಿದಾರರು ಅತೀ ಹೆಚ್ಚು ವಕೀಲರ ಸಮಯವನ್ನು ಅವಲಂಬಿತರಾಗಿರುತ್ತಾರೆ.
ವಕೀಲರು ದೈನಂದಿನ ದಿನಚರಿಯಲ್ಲಿ ತಮ್ಮ ಪ್ರಕರಣಗಳನ್ನು ಪರಿಶೀಲಿಸಲು, ವ್ಯವಹಾರಗಳಿಗೆ ಪ್ರತಿಕ್ರಿಯಿಸಲು, ಬಹುಪಾಲು ಕಚೇರಿಯಿಂದ ಹೊರಗುಳಿದ ನಂತರ ಕಾರ್ಯಗಳನ್ನು ಮುಗಿಸುವ ಅನೀವಾರ್ಯತೆಯಿಂದಲು, ಅಗತ್ಯವಾದ ದಾಖಲೆಗಳನ್ನೂ ಮಾಡುವುದು, ಗಡುವಿನ ಸಮಯದ ಒಳಗೆ ಸಲ್ಲಿಸುವ ಕಾರ್ಯದಿಂದಲೂ ಅಥವಾ ಇನ್ನಿತರ ವ್ಯಯಕ್ತಿಕ ಕಾರಣಗಳಿಂದಲೂ ಅಭ್ಯಾಸದಲ್ಲಿ ತಲ್ಲೀನರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಕಕ್ಷಿದಾರರು, ಕೆಲವೊಂದು ತುರ್ತು ಸಮಸ್ಯೆ ಹೊರತುಪಡಿಸಿ, ಇಂತಹ ಪರಿಸ್ಥಿತಿಯನ್ನು ಕೂಡ ಅರ್ಥ ಮಾಡಿಕೊಂಡು ಸಂಪರ್ಕಿಸಿದಾಗ ಕಕ್ಷಿದಾರರಿಗೆ ಕೂಡ ಸಮಯವನ್ನು ನೀಡಲು ಕೆಲಸವನ್ನು ಕ್ರಮವಾಗಿ ಮಾಡಲು ವಕೀಲರಿಗೆ ಸಹಾಯವಾಗುತ್ತದೆ.
ಸಮಾಜದಲ್ಲಿ ಜನರನ್ನು ಉತ್ತಮ ನಾಗರೀಕರನ್ನಾಗಿ ಪರಿವರ್ತಿಸುವಲ್ಲಿ ವಕೀಲರ ಪಾತ್ರ ಅತೀ ಮುಖ್ಯವಾಗಿದ್ದು, ತಮ್ಮನು ರಕ್ಷಿಸಿಕೊಳ್ಳಲು ಸಾಧ್ಯವಾಗದವರನ್ನೂ ಪ್ರತಿನಿಧಿಸಲು ಮತ್ತು ಆಧುನಿಕ ಸಮಾಜದ ಪ್ರತಿಯೊಂದು ಅಂಶಗಳಲ್ಲೂ ಕೆಲಸ ಮಾಡಲು ಪ್ರತಿದಿನ ವಕೀಲರನ್ನು ನೇಮಿಸಿಕೊಳ್ಳಲಾಗುತ್ತಿದ್ದು ಅವರಿಗೆ ಕಾನೂನಿನ ಸಲಹೆ ಅತೀ ಅಗತ್ಯ. ದೈನಂದಿನ ದಿನಚರಿಯಲ್ಲಿ ಸಾಮಾನ್ಯವಾಗಿ ಒಂದು ಮೋಟಾರು ವಾಹನ ಅಪಘಾತವಾದಾಗಲೂ ಕೂಡ ಜನರಲ್ಲಿ ಕಾನೂನು ಅರಿವಿಲ್ಲದೇ ಸಳ್ಥದಲ್ಲಿಯೇ ಎದುರುದಾರಾರನ್ನು ಬೆದರಿಸಿ ಹಣಸುಲಿಗೆ ಮಾಡುವಂತದ್ದು, ಇನ್ನಿತರ ಕಾನೂನು ಅರಿವಿಲ್ಲದ ಪ್ರಕ್ರಿಯೆಗಳು ನಡೆಯುತ್ತಿರುತ್ತದೆ. ಇಂತಹ ಹಲವಾರು ತಪ್ಪುಗಳನ್ನು ಜನಸಾಮಾನ್ಯರು ದಿನ ನಿತ್ಯ ಮಾಡುತ್ತಿರುತ್ತಾರೆ. ಜನರಿಗೆ ಉತ್ತಮ ಕಾನೂನಿನ ಮಾಹಿತಿ ವಕೀಲರಿಂದ ಅತೀ ಅಗತ್ಯವಾಗಿದ್ದು, ಜನರ ತಪ್ಪುಗಳನ್ನು ತಿದ್ದುಪಡಿಸಿ ಮಾರ್ಗದರ್ಶನ ನೀಡಿ ಉತ್ತಮ ನಾಗರೀಕರನ್ನಾಗಿ ಮಾಡಿಸಿ ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ವಕೀಲರು ಸಮಾಜದಲ್ಲಿ ಬಹುಮುಖ್ಯ ಪಾತ್ರವಹಿಸುತ್ತಾರೆ.