ಮಂಗಳೂರು, ಫೆ 27(SM): ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ಭೂಬಾಗಕ್ಕೆ ಪ್ರವೇಶಿಸಿ ದಾಳಿ ನಡೆಸಿದ್ದು, ಮಾತ್ರವಲ್ಲದೆ, ಗಡಿ ನಿಯಂತ್ರಣ ರೇಖೆಯನ್ನು ದಾಟಿ ಆಗಮಿಸಿದ ಪಾಕಿಸ್ತಾನದ ಎಫ್-೧೬ ವಿಮಾನವನ್ನು ಹೊಡೆದುರುಳಿಸಿದ ಬೆನ್ನಲ್ಲೇ, ಇದೀಗ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಸಾಂದರ್ಭಿಕ ಚಿತ್ರ
ಪಾಕಿಸ್ತಾನ ಕಳುಹಿಸಿದ ಉಗ್ರರನ್ನು ಸದೆ ಬಡಿದಿದ್ದು, ಈ ಹಿನ್ನಲೆಯಲ್ಲಿ ಪ್ರತಿಯಾಗಿ ಪಾಕಿಸ್ತಾನ ಭಾರತದ ಮೇಲೆ ಪ್ರತಿದಾಳಿ ನಡೆಸುವ ಸಾಧ್ಯತೆ ಇರುವ ಹಿನ್ನೆಯಲ್ಲಿ ಕರಾವಳಿಯುದ್ದಕ್ಕೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಸಮುದ್ರ ಮಾರ್ಗವನ್ನು ಬಳಸಿ ಪಾಕಿಸ್ತಾನ ಹಗೆ ತೀರಿಸಲು ಉಗ್ರರನ್ನು ಬಳಸಿ ಕರಾವಳಿ ಭಾಗದಲ್ಲಿ ಪ್ರತಿದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಆದ್ದರಿಂದ ಕರಾವಳಿಯಲ್ಲಿ ನೌಕ ದಳ, ಕೋಸ್ಟ್ ಗಾರ್ಡ್, ಕೋಸ್ಟಲ್ ಪೊಲೀಸರಿಗೆ ಹೈ ಅಲರ್ಟ್ ಆಗಿರಲು ಘೋಷಣೆ ಮಾಡಲಾಗಿದೆ. ರಾಜ್ಯದ ಕರಾವಳಿ ಪ್ರದೇಶಗಳಾದ ಮಂಗಳೂರು, ಉಡುಪಿ, ಉತ್ತರಕನ್ನಡದ ಕಾರವಾರದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಕಾರವಾರದ ಸೀಬರ್ಡ್ ಕದಂಬ ನೌಕಾನೆಲೆಯಲ್ಲೂ ಪ್ರಥಮ ಹಂತದ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಆಳಸಮುದ್ರದಲ್ಲಿ ನಡೆಯುವ ಚಟುವಟಿಕೆಗಳ ಹದ್ದಿನ ಕಣ್ಣಿಡಲಾಗುತ್ತಿದೆ.
ಸಮುದ್ರದಲ್ಲಿ ನೇವಿ, ಕೋಸ್ಟ್ ಗಾರ್ಡ್ ನಿಂದ ಕಟ್ಟೆಚ್ಚರ ವಹಿಸಲಾಗುತ್ತಿದ್ದ ಗಸ್ತು ಹೆಚ್ಚಿಸಲಾಗಿದೆ. ಸಮುದ್ರದಲ್ಲಿ ಗಸ್ತು ನಡೆಸಲು ಡಾರ್ನಿಯೆರ್ ವಿಮಾನ ಬಳಕೆ ಮಾಡಲಾಗುತ್ತಿದೆ. ವಿಮಾನ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಬಂದರು ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ. ಬಂದರು, ಸಮುದ್ರ ವ್ಯಾಪ್ತಿಯಲ್ಲಿ ಕರಾವಳಿ ಕಾವಲು ಪೊಲೀಸರು ಅಲರ್ಟ್ ಆಗಿದ್ದಾರೆ.