ಕುಂದಾಪುರ, ಡಿ 03(DaijiworldNews/MS): ವಿದ್ಯುತ್ ತಂತಿ ಅಳವಡಿಸುವ ವೇಳೆ ಮುನ್ನೆಚ್ಚರಿಕೆ ವಹಿಸದೆ ಕಾರ್ಮಿಕರೊಬ್ಬರ ಸಾವಿಗೆ ಕಾರಣರಾದ ಗುತ್ತಿಗೆದಾರರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
2010ರಲ್ಲಿ ಉಪ್ಪಿನಕುದ್ರು ಗ್ರಾಮದ ಕೆಳಹಿತ್ಲು ಎಂಬಲ್ಲಿ ತಲ್ಲೂರು ಮೆಸ್ಕಾಂಗೆ ಸಂಬಂಧಿಸಿದ ಹಳೆ ವಿದ್ಯುತ್ ತಂತಿ ಬದಲು ಮಾಡಿ ನೂತನ ವಿದ್ಯುತ್ ತಂತಿ ಅಳವಡಿಸುವ ಕೆಲಸ ನಡೆಯುತ್ತಿತ್ತು.
ಸಿದ್ದಾಪುರದ ಕೊಳ್ಕೆಬೈಲು ನಿವಾಸಿ ನರಸಿಂಹ ಕುಲಾಲ್ ಅವರು ಕೆಲಸದ ಗುತ್ತಿಗೆ ಪಡೆದಿದ್ದು ತಲ್ಲೂರಿನ ಮಾರ್ತಾಂಡಪ್ಪ ಹಾಗೂ ತಲ್ಲೂರಿನ ಜಾಫರ್ ಹುಸೇನ್ ಅವರು ವಿದ್ಯುತ್ ತಂತಿಗೆ ಭೂಸಂಪರ್ಕ ನೀಡದೆ ಸಂತೋಷ್ ಹಾಗೂ ಇತರ ನಾಲ್ವರನ್ನು ಕಂಬಕ್ಕೆ ಹತ್ತಿಸಿದ್ದರು.
ಕಾಮಗಾರಿ ವೇಳೆ ಜನರಿದ್ದುದನ್ನು ಗಮನಿಸದೇ ಜಾಫರ್ ಅವರು ವಿದ್ಯುತ್ ಸಂಪರ್ಕ ನೀಡಿದಾಗ ಕಂಬದಲ್ಲಿದ್ದ ನಾಲ್ವರು ಕೆಳಗೆ ಬಿದ್ದಿದ್ದರು. ಆದರೆ ಬಿದ್ದು ಸಂತೋಷ್ ಮೃತಪಟ್ಟಿದ್ದರು. ಇತರರಿಗೆ ಗಾಯವಾಗಿತ್ತು.
ಈ ಬಗ್ಗೆ ಗುತ್ತಿಗೆದಾರ ನರಸಿಂಹ ಕುಲಾಲ್, ಮಾರ್ತಾಂಡಪ್ಪ, ಜಾಫರ್ ಹುಸೇನ್ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಗುತ್ತಿಗೆದಾರ ನರಸಿಂಹ ಕುಲಾಲ್ಗೆ ಸೆಕ್ಷನ್ 337ರಲ್ಲಿ 6 ತಿಂಗಳ ಸಾದಾಶಿಕ್ಷೆ, 500 ರೂ. ದಂಡ, ದಂಡ ತೆರಲು ತಪ್ಪಿದರೆ 15 ದಿನಗಳ ಹೆಚ್ಚುವರಿ ಶಿಕ್ಷೆ, 304(ಎ) ಸೆಕ್ಷನ್ನ ಅಪರಾಧಕ್ಕಾಗಿ 1 ವರ್ಷ ಜೈಲು, 5 ಸಾವಿರ ರೂ. ದಂಡ, ದಂಡ ಪಾವತಿಗೆ ತಪ್ಪಿದರೆ 2 ತಿಂಗಳ ಜೈಲು, ಸೆಕ್ಷನ್ 357ರ ಅಡಿ ದಂಡದ ಹಣದಲ್ಲಿ 3 ಸಾವಿರ ರೂ. ಮೃತರ ಕುಟುಂಬಿಕರಿಗೆ, ಸೆಕ್ಷನ್ 357ರಲ್ಲಿ ಹೆಚ್ಚುವರಿ ಪರಿಹಾರವಾಗಿ 50 ಸಾವಿರ ರೂ.ಗಳನ್ನು ಪಾವತಿಸುವಂತೆ ಆದೇಶಿಸಲಾಗಿದೆ. ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ರೋಹಿಣಿ ಡಿ. ತೀರ್ಪು ನೀಡಿದ್ದು, ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕಿ ವರ್ಷಶ್ರೀ ವಾದಿಸಿದ್ದರು.