ಮಂಗಳೂರು, ಡಿ 03 (DaijiworldNews/DB): ಮಂಗಳೂರು ಕುಕ್ಕರ್ ಸ್ಪೋಟ ಪ್ರಕರಣದ ಶಂಕಿತ ಉಗ್ರ ಶಾರೀಕ್ನ ಭದ್ರತೆಗಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಸಿಬಂದಿಯನ್ನು ನಿಯೋಜಿಸುವ ಸಾಧ್ಯತೆಯಿದೆ. ಕೆಎಸ್ಆರ್ಪಿಯನ್ನು ಒದಗಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು ಸರ್ಕಾರಕ್ಕೆ ಕೇಳಿಕೊಂಡಿದೆ.
ಆರೋಪಿ, ಶಂಕಿತ ಉಗ್ರ ಶಾರೀಕ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಸ್ತುತ ಆತ ಚೇತರಿಸಿಕೊಳ್ಳುತ್ತಿದ್ದಾನೆ. ಆತ ಚೇತರಿಸಿಕೊಂಡ ಬಳಿಕ ಹಲವಾರು ಮಹತ್ವದ ವಿಚಾರಣೆಗಳನ್ನು ನಡೆಸಬೇಕಿರುವುದರಿಂದ ಆತನಿಗೆ ಹೆಚ್ಚಿನ ಭದ್ರತೆಯ ಅಗತ್ಯವೂ ಇದೆ. ಹೀಗಾಗಿ ಸ್ಥಳೀಯ ಪೊಲೀಸರ ಬದಲಾಗಿ ಕೆಎಸ್ಆರ್ಪಿ ಸಿಬಂದಿಯನ್ನು ಒದಗಿಸುವಂತೆ ಎನ್ಐಎ ಕೇಳಿಕೊಂಡಿದೆ ಎನ್ನಲಾಗಿದೆ.
ಮಂಗಳೂರು ಕುಕ್ಕರ್ ಸ್ಪೋಟ ಪ್ರಕರಣದ ತನಿಖೆಯನ್ನು ಈಗಾಗಲೇ ಕೇಂದ್ರ ಸರ್ಕಾರ ಎನ್ಐಎಗೆ ಹಸ್ತಾಂತರಿಸಿದೆ. ಶುಕ್ರವಾರ ನಗರ ಪೊಲೀಸ್ ಅಧಿಕಾರಿಗಳು ತನಿಖೆಯ ದಾಖಲೆಗಳನ್ನು ಎನ್ಐಎ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ದಾಖಲೆಗಳ ಹಸ್ತಾಂತರ ಮುಗಿದ ಬಳಿಕ ಪೂರ್ಣ ಪ್ರಮಾಣದಲ್ಲಿ ಎನ್ಐಎ ತನಿಖೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಆರು ಅಧಿಕಾರಿಗಳಿರುವ ಎನ್ಐಎ ತಂಡ ತನಿಖೆ ನಡೆಸಲು ಮುಂದಾಗಿದ್ದು, ಇನ್ನೂ ಎರಡು ತಂಡಗಳು ಇವರನ್ನು ಸೇರಿಕೊಳ್ಳಲಿವೆ. ಈಗಾಗಲೇ ಪೊಲೀಸರು ಪ್ರಕರಣದ ವಿಚಾರಣೆಯನ್ನು ನಡೆಸಿದ್ದಾರೆ. ಆ ಬಳಿಕ ಈ ಪ್ರಕರಣದ ತನಿಖೆ ಎನ್ಐಎಗೆ ಹಸ್ತಾಂತರವಾಗಿದೆ. ಆದರೆ ಎನ್ಐಎಯು ಆರಂಭದಿಂದಲೇ ತನಿಖೆ ನಡೆಸಲಿದೆ.
ಇನ್ನು ಶಾರೀಕ್ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲು ಇನ್ನೂ ಒಂದು ತಿಂಗಳು ಬೇಕಾಗಬಹುದು ಎಂಬುದಾಗಿ ವೈದ್ಯರು ಹೇಳುತ್ತಾರೆ. ಹೀಗಾಗಿ ಎನ್ಐಎ ಮಂಗಳೂರಿನಲ್ಲಿಯೇ ವಿಚಾರಣೆ ನಡೆಸಬಹುದು ಇಲ್ಲವೇ ಬೆಂಗಳೂರು ಅಥವಾ ದೆಹಲಿಯ ಆಸ್ಪತ್ರೆಗೆ ಸ್ಥಳಾಂತರಿಸಿ ಅಲ್ಲಿ ವಿಚಾರಣೆ ನಡೆಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.