ಉಡುಪಿ, ಡಿ 02 (DaijiworldNews/DB): ಡಾಕ್ಟರ್ ಎಂದು ಇನ್ಸ್ಟಾಗ್ರಾಂನಲ್ಲಿ ಪರಿಚಯಿಸಿಕೊಂಡು ಸ್ನೇಹ ಬೆಳೆಸಿ ಮಹಿಳೆಯೊಬ್ಬರಿಗೆ ವಂಚಕರು 6,91,000 ರೂ. ವಂಚಿಸಿದ ಘಟನೆ ನಡೆದಿದೆ.
ಕಳೆದ ಸೆಪ್ಟಂಬರ್ನಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಇನ್ಸ್ಟಾಗ್ರಾಂನಲ್ಲಿ ಪರಿಚಯಿಸಿಕೊಂಡು ತಾನು ಸ್ಕಾಟ್ಲೆಂಡ್ನಲ್ಲಿ ಡಾಕ್ಟರ್ ಎಂಬುದಾಗಿ ಬಿಂಬಿಸಿದ್ದ. ಆನಂತರ ಮಹಿಳೆಯ ವಾಟ್ಸಾಪ್ ನಂಬರ್ ಪಡೆದುಕೊಂಡು ಚಾಟಿಂಗ್ ನಡೆಸಿದ್ದು, ಇಬ್ಬರೂ ಸ್ನೇಹಿತರಾಗಿದ್ದರು.
ನವೆಂಬರ್ ಮೊದಲ ವಾರದಲ್ಲಿ ಕೊರಿಯರ್ ಮೂಲಕ ಪಾರ್ಸೆಲ್ ಗಿಫ್ಟ್ ಕಳುಹಿಸುವುದಾಗಿ ಮಹಿಳೆಯನ್ನು ನಂಬಿಸಿದ ವ್ಯಕ್ತಿ, ಬಳಿಕ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೊರಿಯರ್ ಕಚೇರಿಯಿಂದ ವ್ಯಕ್ತಿಯೊಬ್ಬ ಕರೆ ಮಾಡಿ ಪೌಂಡ್ ಹಣವನ್ನು ಭಾರತೀಯ ರೂಪಾಯಿಗೆ ಬದಲಾಯಿಸಲು ಹಣ ಪಾವತಿ ಮಾಡಬೇಕು ಎಂದಿರುವುದಾಗಿ ತಿಳಿಸಿದ್ದಾನೆ. ಆತನ ಮಾತನ್ನು ನಂಬಿದ ಮಹಿಳೆ ಆತ ನೀಡಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 6,91,000 ರೂ.ಗಳನ್ನು ಪಾವತಿ ಮಾಡಿದ್ದಾರೆ. ಆದರೆ ಕೊನೆಗೆ ಪಾರ್ಸೆಲ್ ನೀಡದೇ, ಹಣವನ್ನೂ ಹಿಂತಿರುಗಿಸದೆ ಆಕೆಗೆ ವಂಚನೆ ಎಸಗಿದ್ದಾರೆ. ವಂಚನೆಗೊಳಗಾಗಿರುವುದು ಗೊತ್ತಾದ ಕೂಡಲೇ ಮಹಿಳೆ ಸೆನ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.