ಕಾರ್ಕಳ,ಫೆ 27 (MSP): ಕಾಡಿನಿಂದ ನಾಡಿಗೆ ಬಂದ ಕಾಡು ಎಮ್ಮೆಯೊಂದು ಕೆರೆ ಬಿದ್ದ ಘಟನೆ ಕಾರ್ಕಳ ಅಜೆಕಾರುವಿನ ಮಾನಜೆಯಲ್ಲಿ ನಡೆದಿದೆ. ಮಾನಜೆ ರಕ್ಷಿತಾರಣ್ಯ ಪ್ರದೇಶದ ಬಳಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿರುವ ಕೆರೆಯಲ್ಲಿ ಕಾಡು ಎಮ್ಮೆ ಪತ್ತೆಯಾಗಿದೆ.
ಮಾನಜೆಯ ಅಪ್ಪು ನಾಯಕ್ ಎಂಬವರಿಗೆ ಸೇರಿದ ಕೆರೆಯಾಗಿದ್ದು, ಮಧ್ಯಾಹ್ನದ ವೇಳೆಗೆ ಘಟನೆ ಬೆಳಕಿಗೆ ಬಂದಿದೆ. ಸುಮಾರು 15 ಅಡಿ ಆಳವಿರುವ ಕೆರೆಗೆ ಒಂದು ವರ್ಷ ವಯಸ್ಸಿನ ಕಾಡು ಎಮ್ಮೆ ಬಿದ್ದಿದೆ. ಆಹಾರ ಹುಡುಕಿ ಆಕಸ್ಮಿಕವಾಗಿ ಕೆರೆಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ. ರೇಂಜ್ ಆಫೀಸರ್ ಪ್ರಶಾಂತ್, ಅರಣ್ಯಾಧಿಕಾರಿ ಮುಡೂರು ಕೊಠಾರಿ ಸಹಿತ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯ ನಾಗರಿಕ ಸಹಕಾರದೊಂದಿಗೆ ಜೆಸಿಬಿ ಬಳಸಿ ಕಾಡು ಎಮ್ಮೆಯನ್ನು ಕೆರೆಯಿಂದ ಮೇಲಕ್ಕೆತ್ತಿ ಅಗತ್ಯ ಚಿಕಿತ್ಸೆ ನೀಡಿ ಕಾಡಿಗೆ ಬಿಡಲಾಗಿದೆ.
ಪರಿಸರದಲ್ಲಿ ಕಾಡು ಕೋಣ, ಕಾಡು ಎಮ್ಮೆ ಗಳ ಕಾಟ ಎಲ್ಲೆಮೀರಿದೆ. ಇದರಿಂದ ಕೃಷಿ ಹಾನಿಯಾಗುತ್ತಿದೆ ಎಂದು ಕೃಷಿಕರು ಆರೋಪಿಸುತ್ತಿದ್ದಾರೆ.