ಉಡುಪಿ, ಡಿ 02 (DaijiworldNews/DB): ಕೊಲೆ ಪ್ರಕರಣವೊಂದರ ಸಾಕ್ಷಿಗೆ ಎಂಟು ವರ್ಷಗಳ ಹಿಂದೆ ಹಲ್ಲೆ ಮಾಡಿದ್ದಲ್ಲದೆ, ಮಾನಭಂಗ ನಡೆಸಿದ ಆರೋಪಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.
ಧನಂಜಯ್ (35) ಶಿಕ್ಷೆಗೆ ಗುರಿಯಾದ ಆರೋಪಿ. ಪ್ರೀತಿ ನಿರಾಕರಿಸಿದ ಕಾರಣಕ್ಕಾಗಿ ಯೋಗೀಶ್ ಎಂಬಾತ ರಂಜಿತಾ ಎಂಬಾಕೆಯನ್ನು 2013ರ ನವೆಂಬರ್ 27ರಂದು ಕಡೆಕಾರು ಗ್ರಾಮದ ಪಟೇಲರ ತೋಟ ಎಂಬಲ್ಲಿ ಕೊಲೆಗೈದಿದ್ದನು. ಈ ಪ್ರಕರಣದಲ್ಲಿ ರಂಜಿತಾ ಅವರ ಸಂಬಂಧಿ, ನೆರೆಮನೆ ನಿವಾಸಿ ಅಶ್ವಿನಿ ಅವರು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರಲ್ಲದೆ, ಪ್ರಮುಖ ಸಾಕ್ಷಿ ಆಗಿದ್ದರು. ಇದೇ ಕಾರಣಕ್ಕೆ ಕೊಲೆ ಆರೋಪಿ ಯೋಗೀಶ್ನ ಸಂಬಂಧ ಧನಂಜಯ್ ಎಂಬಾತ ಅಶ್ವಿನಿ ಅವರ ಮನೆಗೆ 2014ರ ಸೆಪ್ಟಂಬರ್ 10ರಂದು ಅಕ್ರಮವಾಗಿ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದ್ದ. ಅಲ್ಲದೆ ಅವರ ಬಟ್ಟೆ ಹರಿದು ಹಾಕಿ ಮಾನಭಂಗ ಉಂಟು ಮಾಡಿದ್ದ. ಬಳಿಕ ಅವಾಚ್ಯವಾಗಿ ನಿಂದಿಸಿ ರಂಜಿತಾ ಕೊಲೆ ಪ್ರಕರಣಕ್ಕೆ ಸಾಕ್ಷಿ ಹೇಳದಂತೆ ಬೆದರಿಕೆಯೊಡ್ಡಿದ್ದ. ಸಾಕ್ಷಿ ಹೇಳಿದ್ದಲ್ಲಿ ಕೊಲೆ ಮಾಡುವುದಾಗಿಯೂ ಹೇಳಿದ್ದ ಹಿನ್ನೆಲೆಯಲ್ಲಿ ಆತನ ವಿರುದ್ದ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಎಂಟು ವರ್ಷಗಳ ಬಳಿಕ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ದಿನೇಶ್ ಹೆಗ್ಡೆ ಅವರು ಆರೋಪಿ ಮೇಲಿನ ಆರೋಪ ಸಾಬೀತಾಗಿದ್ದು, ಆತನಿಗೆ ಶಿಕ್ಷೆ ಪ್ರಕಟಿಸಿದ್ದಾರೆ. ಮನೆಯೊಳಗೆ ಅಕ್ರಮವಾಗಿ ನುಗ್ಗಿದ್ದಕ್ಕೆ ಮತ್ತು ಹಲ್ಲೆ ನಡೆಸಿದ್ದಕ್ಕೆ ತಲಾ ಆರು ತಿಂಗಳು ಸಾದಾ ಜೈಲು ಶಿಕ್ಷೆ, ಮಾನಭಂಗ ಉಂಟು ಮಾಡಿದ್ದಕ್ಕೆ ಮೂರು ವರ್ಷ ಜೈಲು ಶಿಕ್ಷೆ ಮತ್ತು 20ಸಾವಿರ ರೂ. ದಂಡ, ಅವಾಚ್ಯವಾಗಿ ನಿಂದಿಸಿದ್ದಕ್ಕೆ ಆರು ತಿಂಗಳು ಜೈಲು ಶಿಕ್ಷೆ ಹಾಗೂ ಕೊಲೆ ಬೆದರಿಕೆ ಹಾಕಿದ್ದಕ್ಕೆ ಆರು ತಿಂಗಳು ಜೈಲು ಶಿಕ್ಷೆ ಹಾಗೂ 5ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಷನ್ ಜಯರಾಮ ಶೆಟ್ಟಿ ವಾದಿಸಿದ್ದರು.