ಬೈಂದೂರು, ಡಿ 02 (daijiworldNews/HR): ಗಾಂಧೀ ಮೈದಾನದಲ್ಲಿ ನಿರ್ಮಿಸಲು ಹೊರಟಿರುವ ಪುರಭವನವನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಯ ಬೇರೆ ಭಾಗದಲ್ಲಿ ನಿರ್ಮಿಸಲಿ ಎಂದು ಬೈಂದೂರು ಗಾಂಧೀ ಮೈದಾನ ಸಂರಕ್ಷಣಾ ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ಬಿಜೂರು ಆಗ್ರಹಿಸಿದ್ದಾರೆ.
ಬೈಂದೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಧಿ ಮೈದಾನದ ಜಾಗವನ್ನು ಪದವಿಪೂರ್ವ ಕಾಲೇಜಿನ ಆಟದ ಮೈದಾನವಾಗಿ ಮಾತ್ರ ಬಳಸಿಕೊಳ್ಳುವಂತೆ ಹಿಂದಿನ ಜಿಲ್ಲಾಧಿಕಾರಿ ಷರತ್ತುಬದ್ಧ ಅನುಮತಿ ನೀಡಿದ್ದರು ಎಂದ ಅವರು, ಇಲ್ಲಿ ಪುರಭವನ ನಿರ್ಮಿಸಿ ಬೈಂದೂರು ಹೃದಯ ಭಾಗದಲ್ಲಿರುವ ಏಕೈಕ ಮೈದಾನವನ್ನು ಹಾಳು ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಸಮಿತಿಯ ಗಿರೀಶ್ ಬೈಂದೂರು ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಮೈದಾನದ ಜಾಗವನ್ನು ಕಬಳಿಸಿದರೆ ಮತ್ತೊಂದು ಮೈದಾನ ನಿರ್ಮಿಸಲು ಸಾಧ್ಯವಿಲ್ಲ. ಮಕ್ಕಳಿಂದ ವಯೋವೃದ್ಧರ ತನಕ ಪ್ರತಿಯೊಬ್ಬರಿಗೂ ಮೈದಾನದ ಅಗತ್ಯವಿದೆ. ಮೈದಾನ ಕಿರಿದಾಗುತ್ತಾ ಹೋದರೆ ಉತ್ತಮ ಕ್ರೀಡಾಪಟುಗಳು ತರಬೇತಿ ಪಡೆಯಲು ಹೇಗೆ ಸಾಧ್ಯ. ಸಾಹಿತಿ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರ ಬಗ್ಗೆ ನಮಗೆ ಹೆಮ್ಮೆಯಿದ್ದು, ಪುರಭವನಕ್ಕಾಗಿ ಮೈದಾನ ಬಳಸಿಕೊಳ್ಳುವುದು ಸರಿಯಲ್ಲ ಎಂದರು.
ದಲಿತ ಸಂಘರ್ಷ ಸಮಿತಿಯ ಶಿವರಾಜ ಯೋಜನಾನಗರ, ಸಮಿತಿಯ ರಾಘವೇಂದ್ರ ಪಡುವರಿ, ಮಂಗೇಶ್ ಶ್ಯಾನುಭೋಗ್ ಮೊ ದಲಾದವರು ಉಪಸ್ಥಿತರಿದ್ದರು.