ಬೆಳ್ತಂಗಡಿ, ಡಿ. 01 (DaijiworldNews/SM) : ಕೆರೆಗೆ ಹಾರಿ ಅಟೋ ಚಾಲಕ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ರೋಚಕ ತಿರುವು ಸಿಕ್ಕಿದೆ.
ರಿಕ್ಷಾ ಚಾಲಕ ಪ್ರವೀಣ್ ಸಾವಿನ ಬಗ್ಗೆ ಅವರ ಪತ್ನಿ ಅನುಮಾನ ವ್ಯಕ್ತಪಡಿಸಿದ್ದಾರೆ. ತನ್ನ ಪತಿಯ ಸಾವಿನ ಬಗ್ಗೆ ಹಲವಾರು ಅನುಮಾನಗಳಿದ್ದು ಈಬಗ್ಗೆ ತನಿಖೆ ನಡೆಸುವಂತೆ ಮೃತ ಪ್ರವೀಣ್ ಪಿಂಟೋ ಅವರ ಪತ್ನಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಗುರುವಾಯನಕೆರೆಯಲ್ಲಿ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿರುವ ಪ್ರವೀಣ್ ಪಿಂಟೋ ಅವರು ಮಂಗಳವಾರ ರಾತ್ರಿ ಮನೆಯಿಂದ ಓಡಿಲ್ನಾಳ ಗ್ರಾಮದ ಅಮರ್ ಜಾಲ್ ಎಂಬಲ್ಲಿಗೆ ಮೆಹಂದಿ ಕಾರ್ಯಕ್ರಮಕ್ಕೆಂದು ಹೋಗಿದ್ದರು.
ಆತ ಮನೆಗೆ ಬಾರದಿದ್ದಾಗ ಪತ್ನಿ ಕರೆಮಾಡಿದಾಗ ರಾತ್ರಿ 1.39ಕ್ಕೆ ತಾನು ಮನೆಗೆ ಬರುತ್ತೇನೆ ಎಂದು ತಿಳಿಸಿದ್ದರು. ಆದರೆ ಮನೆಗೆ ಹಿಂತಿರುಗಿರಲಿಲ್ಲ.
ಬಳಿಕ ಬುಧವಾರ ಬೆಳಿಗ್ಗೆ ಪ್ರವೀಣನ ಡ್ರೈವಿಂಗ್ ಲೈಸನ್ಸ್ ಹಾಗೂ ದಾಖಲೆಗಳು ಕೆರೆಯ ಸಮೀಪ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ ಎಂದು ಅವರ ಪತ್ನಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಪತಿಯ ಸಾವಿನ ಬಗ್ಗೆ ಅನುಮಾನವಿದೆ ಎಂದು ಅವರು ದೂರು ನೀಡಿದ್ದಾರೆ.