ಮಂಗಳೂರು, ಡಿ 01 (DaijiworldNews/DB): ಸುರತ್ಕಲ್ ಟೋಲ್ಗೇಟ್ ರದ್ದುಗೊಳಿಸಿ ಹೆಜಮಾಡಿ ಟೋಲ್ಗೇಟ್ನಲ್ಲಿ ಹೆಚ್ಚುವರಿ ಶುಲ್ಕ ವಿಧಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಸುರತ್ಕಲ್ ಹಾಗೂ ಹೆಜಮಾಡಿ ಟೋಲ್ಗೇಟ್ನ ಮದುವೆ ಮಾಡಿಸುವ ಆಮಂತ್ರಣ ಪತ್ರಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮದುವೆ ಆಮಂತ್ರಣಪತ್ರಿಕೆಯಲ್ಲಿರುವಂತೆ ಮೇಲ್ಭಾಗದಲ್ಲಿ 'ಶುಭ ವಿವಾಹ' ಎಂದೂ, 'ಬಿಜೆಪಿ ಸರ್ಕಾರದ ಕೃಪೆಯಿಂದ' ಎಂದೂ ಬರೆಯಲಾಗಿದೆ. 'ಪ್ರಿಯ ನಾಗರಿಕರೇ, ಡಿಸೆಂಬರ್ 01 2022 ಗುರುವಾರ ದಿವಾ ಗಂಟೆ 12ಕ್ಕೆ ಸರಿಯಾಗಿ ಸುರತ್ಕಲ್ನಲ್ಲಿ ಅಕ್ರಮವಾಗಿದ್ದ ಎನ್ಐಟಿಕೆ ಬಳಿಯ ಸುರತ್ಕಲ್ ಟೋಲ್ಗೇಟ್ ಎಂಬ ವಧುವನ್ನು ಹೆಜಮಾಡಿ ಟೋಲ್ಗೇಟ್ ಎಂಬ ವರನೊಂದಿಗೆ ಮದುವೆಯನ್ನು ಕೇಂದ್ರ ಶ್ರೀ ನರೇಂದ್ರ ಮೋದಿ ಸರ್ಕಾರದ ಹೆದ್ದಾರಿ ಪ್ರಾಧಿಕಾರ ಸಚಿವರಾದ ನಿತಿನ್ ಗಡ್ಕರಿ ಸಮ್ಮುಖದಲ್ಲಿ ನಳಿನ್ಕುಮಾರ್ ಕಟೀಲು ಅವರ ಮನವಿ ಮೇರೆಗೆ ಏರ್ಪಡಿಸಲಾಗಿದೆ'.
'ತಾವುಗಳು ಬಂದು ಸುರತ್ಕಲ್ ಮತ್ತು ಹೆಜಮಾಡಿ ಟೋಲ್ ಸುಂಕವನ್ನು ಒಂದೇ ಕಡೆ ಪಾವತಿಸಿ ಶುಭ ಹಾರೈಸಬೇಕಾಗಿ ವಿನಂತಿ..ಉಡುಗೊರೆಯೇ ಆಶೀರ್ವಾದ..ಶುಭ ಕೋರುವ: ಬಿಜೆಪಿ ಎಂಎಲ್ಎಗಳು ದಕ್ಷಿಣ ಕನ್ನಡ' ಎಂದು ಬರೆಯಲಾಗಿದೆ. ಸದ್ಯ ಈ ಮದುವೆ ಆಮಂತ್ರಣ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.