ಬಂಟ್ವಾಳ, ಫೆ 26(SM): ಬಂಟ್ವಾಳ ಡಿ.ವೈ.ಎಸ್.ಪಿ. ಹಾಗೂ ಬಂಟ್ವಾಳ ಸಾರಿಗೆ ಅಧಿಕಾರಿಗಳಿಂದ ಏಕಕಾಲದಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿದವರ ವಿರುದ್ದ ಕಾರ್ಯಾಚರಣೆ ನಡೆಸಿದರು. ಬಂಟ್ವಾಳ ಡಿ.ವೈ.ಎಸ್.ಪಿ. ಸೈದುಲ್ ಅಡಾವತ್ ಅವರ ನಿರ್ದೇಶನದಂತೆ ಬಂಟ್ವಾಳ ಸಬ್ ಡಿವಿಷನ್ ವಿಭಾಗದಲ್ಲಿ ಏಕಕಾಲದಲ್ಲಿ ಸುಮಾರು 22 ಅಧಿಕಾರಿಗಳು ರಸ್ತೆಗಿಳಿದು ವಾಹನ ತಪಾಸಣೆ ನಡೆಸಿ ದ್ವಿಚಕ್ರ ಹಾಗೂ ಘನ ವಾಹನಗಳು ಸೇರಿದಂತೆ ಸುಮಾರು 800 ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಈ ಒಟ್ಟು ಪ್ರಕರಣಗಳಲ್ಲಿ 1.25 ಲಕ್ಷ ರೂ ದಂಡ ವಿಧಿಸಿದ್ದಾರೆ. ವಾಹನಗಳ ದಾಖಲಾತಿ ಇಲ್ಲದೆ ಮತ್ತು ವಿಮೆ ಇಲ್ಲದ ವಾಹನಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಡಿ.ವೈಎಸ್.ಪಿ.ಸೈದುಲು ಅಡಾವತ್ ಅವರು ಸ್ವತಃ ರಸ್ತೆಗಳಿದುದಲ್ಲದೆ, ಬಂಟ್ವಾಳ, ಬೆಳ್ತಂಗಡಿ, ವಿಟ್ಲದ ಗಲ್ಲಿಗಲ್ಲಿಗಳಲ್ಲಿ ಪೋಲೀಸ್ ಅಧಿಕಾರಿಗಳು ವಾಹನಗಳ ತಪಾಸಣೆ ನಡೆಸಿದರು. ಈ ಮೂಲಕ ಟ್ರಾಫಿಕ್ ರೂಲ್ ಪಾಲಿಸದ ವಾಹನ ಸವಾರರಿಗೆ ಸಂದೇಶ ರವಾನೆ ಮಾಡುವ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೆಲ್ಮೆಟ್ ಧರಿಸದೆ ಪ್ರಯಾಣಿಸುವ ದ್ವಿಚಕ್ರ ವಾಹನ ಸವಾರರಿಂದ ಹಿಡಿದು ವಿಮೆ, ಹಾಗೂ ವಾಹನ ಫಿಟ್ ನೆಸ್ ವರೆಗೂ ತಪಾಸಣೆ ನಡೆಸಿ ವಾಹನ ಸವಾರರ ಬೆವರಿಳಿಸಿದರು. ಎರಡು ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಸಹಿತ ಅನೇಕ ಘನಗಾತ್ರದ ವಾಹನಗಳಿಗೆ ಕೇಸು ದಾಖಲಿಸಿದರು.
ಇನ್ನು ಮುಂದೆ ಸಂಚಾರ ಮಾಡುವ ವೇಳೆ ಕಾನೂನು ಪಾಲಿಸುವಂತೆ ಎಚ್ಚರಿಕೆಯ ಸಂದೇಶ ವನ್ನು ಅವರು ನೀಡಿದ್ದಾರೆ. 40 ವಾಹನಗಳನ್ನು ಜಪ್ತಿ ಮಾಡಲಾಗಿದೆ.