ಸುಳ್ಯ, ನ. 29 (daijiworldews/HR): ವಿಳಾಸ ಕೇಳುವ ನೆಪದಲ್ಲಿ ಒಬ್ಬಂಟಿ ವೃದ್ದೆಯ ಮನೆಗೆ ಕಳ್ಳನೋರ್ವ ನುಗ್ಗಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿರುವ ಘಟನೆ ನ.28 ರಂದು ಬೆಳಿಗ್ಗೆ ಸುಳ್ಯ ಜಾಲ್ಸೂರು ಗ್ರಾಮದ ಅಡ್ಕಾರ್ ಬೈತಡ್ಕ ವೈಲ್ಡ್ ಕೆಫೆ ಬಳಿ ನಡೆದಿದೆ.
ಚಿನ್ನ ಕಳೆದುಕೊಂಡ ಮಹಿಳೆ ಬೈತಡ್ಕ ನಿವಾಸಿ ದಿವಂಗತ ಶಿವರಾಯರವರ ಪತ್ನಿ ಕಮಲ (64 )ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ವೃದ್ದೆ ದೂರು ನೀಡಿದ್ದು, ಜಾಲ್ಸೂರು ಗ್ರಾಮದ ಬೈತಡ್ಕ ಎಂಬಲ್ಲಿ ತಮ್ಮ ಮನೆಯಲ್ಲಿರುವ ಬೆಳಗ್ಗೆ ಮೋಟಾರ್ ಸೈಕಲ್ ನಲ್ಲಿ ಬಂದ ಒಬ್ಬ ವ್ಯಕ್ತಿ ನನ್ನ ಮನೆಯ ಅಂಗಳಕ್ಕೆ ಬಂದು ತನ್ನ ಮೋಟಾರ್ ಸೈಕಲ್ ಅನ್ನು ನಿಲ್ಲಿಸಿ ಇಲ್ಲಿ ಕೆ ಟಿ ರಾಜ ಎಂಬವರ ಮನೆ ಎಲ್ಲಿ ಎಂದು ಕೇಳಿದ್ದಾನೆ. ಅದಕ್ಕೆ ನಾನು ನನಗೆ ಗೊತ್ತಿಲ್ಲ ಎಂದಾಗ, ಆತ ನಾನು ಸ್ವಲ್ಪ ಇಲ್ಲೆ ಕುಳಿತು ನನ್ನನ್ನು ಇಲ್ಲಿಗೆ ಬರಲು ಹೇಳಿರುವ ವ್ಯಕ್ತಿ ಬರುವರೆಗೆ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ನಂತರ ಕುಡಿಯಲ್ಲಿಕೆ ನೀರು ಕೊಡಿ ಎಂದು ನನ್ನಬಳಿ ಕೇಳಿದಾಗ ಮನೆಯ ಒಳಗಿನಿಂದ ನೀರು ತೆಗೆದುಕೊಂಡು ಬರಲು ಹೋಗುವಾಗ ನನ್ನ ಹಿಂದೆ ಮನೆಯ ಒಳಗೆ ಆ ವ್ಯಕ್ತಿಯು ಬಂದು ನನ್ನ ಕುತ್ತಿಗೆಯನ್ನು ಹಿಂದಿನಿಂದ ಎರಡು ಕೈಗಳಿಂದ ಹಿಡಿದು ಬೊಬ್ಬೆ ಹಾಕಿದರೆ ಕೊಂದು ಬಿಡುತ್ತೇನೆಂದು ಹೇಳಿ ಕುತ್ತಿಗೆಯಿಂದ ಒಂದು ಕೈ ತೆಗೆದು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕೀಳಲು ಪ್ರಯತ್ನಿಸಿದ್ದಾನೆ.
ಇನ್ನು ಆ ಸಮಯ ನಾನು ಬೊಬ್ಬೆ ಹಾಕುತ್ತಾ ತನ್ನ ಚಿನ್ನದ ಸರವನ್ನು ಎರಡು ಕೈಗಳಿಂದ ಬಿಗಿಯಾಗಿ ಹಿಡಿದುಕೊಂಡಾಗ ಕುತ್ತಿಗೆಯಲ್ಲಿದ್ದ ಚಿನ್ನದ ಸರ ತುಂಡಾಗಿ ಅರ್ಧ ಚಿನ್ನದ ಸರವನ್ನು ಆತ ಕಿತ್ತುಕೊಂಡು ನನ್ನನ್ನು ನೆಲಕ್ಕೆ ದೂಡಿ, ಬೊಬ್ಬೆ ಹಾಕುತ್ತಿದ್ದರಿಂದ ಆತನು ಕಿತ್ತುಕೊಂಡ ಚಿನ್ನ ಸರ ಸಮೇತ ನಿಲ್ಲಿಸಿದ್ದ ಬೈಕ್ ನಲ್ಲಿ ಜಾಲ್ಸೂರು ಕಡೆಗೆ ಪರಾರಿಯಾಗಿದ್ದಾನೆ. ಆತನಿಗೆ ಸುಮಾರು 26-30 ವರ್ಷ ವಯಸ್ಸು ಇದ್ದು ಎಣ್ಣೆ ಕಪ್ಪು ಮೈ ಬಣ್ಣದ ಸಾಧಾರಣ ಮೈಕ್ಕಟಿನ ಸುಮಾರು 4.5 ಅಡಿ ಎತ್ತರದ ವ್ಯಕ್ತಿಯಾಗಿದ್ದಾನೆ. ತಿಳಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಕೆಂಪು ಬಣ್ಣದ ತುಂಬು ತೋಳಿನ ಟೀ ಶರ್ಟ್ ಧರಿಸಿರುತ್ತಾನೆ. ಮೋಟಾರ್ ಸೈಕಲ್ ಕಪ್ಪು ಬಣ್ಣದಾಗಿರುತ್ತದೆ ಎಂದು ತಿಳಿಸಿದ್ದಾರೆ.
ಚಿನ್ನದ ಸರವು ಒಟ್ಟು 26 ಗ್ರಾಂ ಇದ್ದು ಅದರಲ್ಲಿ 13 ಗ್ರಾಂ ನಷ್ಟು ಚಿನ್ನದ ಸರವನ್ನು ಕಳ್ಳನು ಕಿತ್ತುಕೊಂಡು ಹೋಗಿರುವುದಾಗಿದ್ದು, ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಜೀವ ಬೆದರಿಕೆ ಹಾಕಿ ಕುತ್ತಿಗೆಯಲ್ಲಿದ್ದ ಚಿನ್ನದ ಸರದ ತುಂಡನ್ನು ಕಿತ್ತುಕೊಂಡು ಹೋಗಿರುವ ಕಳ್ಳನನ್ನು ಮತ್ತು ನನ್ನ ಚಿನ್ನದ ಸರವನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ
ಸುಳ್ಯ ಪೊಲೀಸರು ದೂರು ದಾಖಲಿಸಿಕೊಂಡು ಕಳ್ಳನ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ ಎನ್ನಲಾಗಿದೆ.