ಬೆಳ್ಮಣ್, ಫೆ 26(SM): ಇಲ್ಲಿನ ನಂದಳಿಕೆ ಕ್ರಾಸ್ ಬಳಿಯ ಗುಡ್ವಿಲ್ ಎಂಟರ್ಪ್ರೈಸಸ್ನ ಶಟರ್ ಮುರಿದು ಸುಮಾರು 18 ಟೀವಿ ಸಹಿತ ಕ್ಯಾಷ್ ಕೌಂಟರ್ನಲ್ಲಿದ್ದ ನಗದು ಕಳವುಗೈದಿರುವ ಘಟನೆ ನಡೆದಿದೆ.
ಶ್ರೀಧರ್ ಎಂಬವರ ಮಾಲಕತ್ವದ ಈ ಅಂಗಡಿಯಲ್ಲಿ ಇಲೆಕ್ಟ್ರಾನಿಕ್ಸ್ ಉಪಕರಣಗಳಿದ್ದು ಮಾಲಕರ ಮನೆ ಈ ಅಂಗಡಿಯ ಮೇಲ್ಚಾವಣಿಯಲ್ಲಿದ್ದರೂ ಕಳ್ಳತನ ನಡೆದಿದೆ. ಈ ಮಾಹಿತಿ ಬೆಳಿಗ್ಗೆ ಪೇಪರ್ ಹಾಕುವವರಿಂದಲೇ ಮಾಲಕರಿಗೆ ತಿಳಿದು ಬಂದಿದೆ.
ಸಿಸಿ ಕ್ಯಾಮರಾ ತಿರುಗಿಸಿದರು, ಹಾರ್ಡ್ ಡಿಸ್ಕ್ ಕದ್ದೊಯ್ದರು:
ಬೆಳಗಿನ ಜಾವ 3ರಿಂದ 4 ಗಂಟೆಯ ಹೊತ್ತಿಗೆ ಈ ಘಟನೆ ಸಂಭವಿಸಿದೆ ಎನ್ನಲಾಗಿದ್ದು ಕಳ್ಳರು ಅಂಗಡಿಯ ಹೊರಗಿನ ಹಾಗೂ ಒಳಗಿನ ಸಿಸಿ ಕ್ಯಾಮರಾ ಪಾಯಿಂಟ್ಗಳನ್ನು ತಿರುಗಿಸಿದ್ದು ಅಂಗಡಿಯ ಒಳಗಡೆ ಇರಿಸಲಾದ ಸಿಸಿ ಕ್ಯಾಮರಾದ ಹಾರ್ಡ್ ಡಿಸ್ಕನ್ನು ಕದ್ದೊಯ್ದಿದ್ದಾರೆ. ಗುಡ್ವಿಲ್ ಅಂಗಡಿಯ ಮೇಲ್ಮಹಡಿಯಲ್ಲಿ ನಂದಳಿಕೆ ಗ್ರಾಮ ಪಂಚಾಯತ್ನ ಆಡಳಿತ ಕಚೇರಿಯಿದ್ದು ಇಲ್ಲಿನ ಸಿಸಿ ಕ್ಯಾಮರಾಗೆ ಪಂಚಾಯತ್ನ ಬೋರ್ಡ್ ಅಡ್ಡವಾಗಿರುವುದೇ ಕಳ್ಳರಿಗೆ ವರದಾನವಾಯಿತು. ಈ ಮೂಲಕ ಪಂಚಾಯತ್ನ ಸಿಸಿ ಕ್ಯಾಮರಾ ಇದ್ದರೂ ಉಪಯೋಗಕ್ಕಿಲ್ಲದಂತಾಗಿದೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪರಿಶಿಲನೆ ನಡೆಸಲಾಗುತ್ತಿದೆ.