ಕಾರ್ಕಳ, ನ 28 (DaijiworldNews/SM): ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಕಲುಷಿತ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ಇದರಿಂದ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ ಇದರ ಬಗ್ಗೆ ತೀವ್ರ ಕಟ್ಟೆಚ್ಚರ ಅಗತ್ಯವೆಂದು ಪ್ರತಿಪಕ್ಷ ಸದಸ್ಯ ಶುಭದರಾವ್ ಮಹತ್ವದ ವಿಚಾರವೊಂದನ್ನು ಪುರಸಭಾ ಸಾಮಾನ್ಯ ಸಭೆಯಲ್ಲಿ ಮುಂದಿಟ್ಟರು.
ಪುರಸಭಾ ಅಧ್ಯಕ್ಷೆ ಸುಮಾಕೇಶವ ಅಧ್ಯಕ್ಷತೆಯಲ್ಲಿ ಜರುಗಿದ್ದ ಸಾಮಾನ್ಯ ಸಭೆಯಲ್ಲಿ ಮೇಲಿನ ವಿಚಾರದ ಕುರಿತು ಮತಾನಾಡಿದ ಶುಭದರಾವ್, ತೆಳ್ಳಾರು ಬಲ್ಮಗುಂಡಿಯ ಕಿಂಡಿಅಣೆಕಟ್ಟಿನಿಂದ ರಾಮಸಮುದ್ರಕ್ಕೆ ನೀರು ಸರಬರಾಜು ಆಗುತ್ತಿದ್ದು, ರಾಮಸಮುದ್ರದ ನೀರುಶುದ್ಧೀಕರಣ ಪ್ರಕ್ರಿಯೆಯೂ ನಿಷ್ಕ್ರಿಯೆ ಗೊಂಡು ವರ್ಷ ಕಳೆದು ಹೋಗಿದ್ದು, ಇದರತ್ತ ಗಮನ ಹರಿಸಬೇಕಾಗಿದ್ದ ಆಡಳಿತ ವರ್ಗವು ಜನಸಾಮಾನ್ಯದ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ಇದರಿಂದ ಬೆಳ್ಳಾರಿನ ಬಲ್ಮಗುಂಡಿಯ ನೀರು ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಸೇರುತ್ತಿದೆ. ಗ್ರಾಹಕರಿಗೆ ತಲುಪುವ ನೀರು ಕುಡಿಯಲು ಯೋಗ್ಯವಲ್ಲವೆಂಬ ವರದಿಯೂ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಯ ವರದಿಯಿಂದ ದೃಢಪಟ್ಟಿದೆ ಎಂಬ ಅಂಶವನ್ನು ಸಭೆಯ ಮುಂದಿಟ್ಟರು.
ಮೇಲಿನ ವಿಚಾರವನವನ್ನೇ ಮುಂದಿಟ್ಟು ಮಾತನಾಡಿದ ಪ್ರತಿಪಕ್ಷ ಸದಸ್ಯ ಅಶ್ಪಕ್ ಅಹಮ್ಮದ್ ಮಾತನಾಡಿ, ರಾಮಸಮುದ್ರ ಕುಡಿಯುವ ನೀರಿನ ಘಟಕ ದುರಸ್ಥಿಗೆ ಕಳೆದ ಸಾಮಾನ್ಯ ಸಭೆ ಕಳೆದು ಐದು ದಿನಗಳ ಬಳಿಕ ಜಿಲ್ಲಾಧಿಕಾರಿಯಿಂದ ಒಪ್ಪಿಗೆ ದೊರೆತ್ತಿದೆ. ಪುರಸಭಾ ಅಧಿಕಾರಿ ವರ್ಗ ಸಾಮಾನ್ಯ ಸಭೆಯಲ್ಲಿ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಕಳೆದ ಸಾಮಾನ್ಯ ಸಭೆಯಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆದಿದ್ದು, ರೂ. ೩೪ ಲಕ್ಷ ಅದಕ್ಕಾಗಿ ವಿನಿಯೋಗಿಸಲು ಸಾಮಾನ್ಯಸಭೆಯಲ್ಲಿ ಒಪ್ಪಿಗೆಗಾಗಿ ಮುಂದಿಡಲಾಗಿತ್ತು. ಮಾತ್ರವಲ್ಲದೇ ಕಂಟ್ರಾಕ್ಟರ್ದಾರ ಪರವಾಗಿ ಅಭಿಯಂತರರು ೧೦ ನಿಮಷ ಕಾಲ ಬ್ಯಾಂಟಿಂಗ್ ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗಳನ್ನು ಗಮನಿಸಿದಾಗ ಕರೆದಿರುವ ಟೆಂಡರ್ನಲ್ಲಿ ಏನೋ ಎಡವಟ್ಟು ನಡೆದಿದೆ. ಜಿಲ್ಲಾಧಿಖಾರಿಯ ಅನುಮತಿಯೂ ಪೂರ್ವದಲ್ಲಿ ಇಂಜಿನಿಯರ್ ಟೆಂಡರ್ ಕರೆದಿರುವ ಉದ್ದೇಶವಾದರೂ ಏನೆಂಬುವುದನ್ನು ಬಯಲಾಗಬೇಕೆಂದು ಸಭೆಯ ಮುಂದಿಟ್ಟರು.
ಇದೇ ವಿಚಾರದಲ್ಲಿ ಆಡಳಿತ ಪಕ್ಷದ ಸ್ಥಾಯೀ ಸಮಿತಿ ಅಧ್ಯಕ್ಷ ಯೋಗಿಶ್ ದೇವಾಡಿಗ ಮಾತನಾಡಿ, ಸ್ಥಾಯೀ ಸಮಿತಿಯಲ್ಲಿ ಕೈಗೊಳ್ಳುವ ಅಗತ್ಯ ಕಾಮಗಾರಿಗಳನ್ನು ಮಾಡುವುದಕ್ಕೆ ಅಭಿಯಂತರರು ನಾನಾ ಕಾರಣ ನೀಡಿ ತಡೆಯೊಡ್ಡುತ್ತಿದ್ದಾರೆ. ರೂ. ೨೪ ಲಕ್ಷ ವೆಚ್ಚದಲ್ಲಿ ಟೆಂಡರ್ ಕರೆದಿರುವ ಒಳಮರ್ಮ ಏನೆಂಬುವುದು ಸಭೆಯಲ್ಲಿ ಅಭಿಯಂತರರೇ ಉತ್ತರಿಸಬೇಕು. ಸದಸ್ಯ ಕಾರ್ಯದರ್ಶಿಯಾಗಿರುವ ಪುರಸಭಾ ಮುಖ್ಯಾಧಿಕಾರಿ ಅವರು ಈ ಲೋಪದ ಜವಾಬ್ದಾರಿಯಾಗಿರುತ್ತಾರೆ ಎಂದು ಆರೋಪಿಸಿದರು.