ಕುಂದಾಪುರ, ನ 27 (DaijiworldNews/HR): ತಾಲೂಕಿನ ಹೆಮ್ಮಾಡಿ ಗ್ರಾಮದ ಸಂತೋಷ ನಗರ ಎಂಬಲ್ಲಿ ಅನ್ನಭಾಗ್ಯ ಯೋಜನೆಯ ಮೂಲಕ ವಿತರಿಸರುವ ಅಕ್ಕಿಯನ್ನು ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಆಹಾರ ನಿರೀಕ್ಷಕ ಸುರೇಶ್ ಮತ್ತು ಪೊಲೀಸರು ನವೆಂಬರ್ 25 ರಂದು ರಾತ್ರಿ ಸಂತೋಷ ನಗರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಸರಕು ಸಾಗಣೆ ವಾಹನವನ್ನು ಅಡ್ಡಗಟ್ಟಿದ್ದು, ಈ ವೇಳೆ ಅಕ್ಕಿ ತುಂಬಿದ 24 ಚೀಲಗಳು ಮತ್ತು 40 ಖಾಲಿ ಪ್ಲಾಸ್ಟಿಕ್ ಚೀಲಗಳು ಪೊಲೀಸರಿಗೆ ಸಿಕ್ಕಿವೆ.
ಗ್ರಾಮಗಳಿಂದ ಸಂತೋಷ ನಗರ ನಿವಾಸಿ ಅಯೂಬ್ ಸಂಗ್ರಹಿಸಿದ ಅಕ್ಕಿಯನ್ನು ಕೋಡಿ ನಿವಾಸಿ ಫಿರೋಜ್ ಎಂಬುವರಿಗೆ ತಲುಪಿಸುವುದಾಗಿ ಚಾಲಕ ಬಡಾಕೆರೆಯ ವಿಜಯ ಟಿ ಪೂಜಾರಿ (39) ವಿಚಾರಣೆಗೆ ತಿಳಿಸಿದರು. ಅದರಂತೆ ಚಾಲಕ ವಿಜಯ ಅವರು ಫಿರೋಜ್ಗೆ ತಲುಪಿಸಲು ಮರವಂತೆಗೆ ಅಕ್ಕಿಯನ್ನು ಸಾಗಿಸುತ್ತಿದ್ದರು.
24 ಚೀಲಗಳನ್ನು ತೂಕ ಮಾಡಿ ನೋಡಿದಾಗ 1000 ಕೆಜಿ ತೂಕವಿದ್ದು, ಇದರ ಅಂದಾಜು ಮೌಲ್ಯ 22,000 ರೂ., ವಶಪಡಿಸಿಕೊಂಡ ಸರಕು ಸಾಗಣೆ ವಾಹನದ ಮೌಲ್ಯ 1.30 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.