ಬೆಳ್ತಂಗಡಿ, ನ 26 (DaijiworldNews/HR): ತನ್ನ ಮಗಳ ತಲೆಗೆ ಹೊಡೆದು ನೋವುಂಟು ಮಾಡಿದ ಆರೋಪದಡಿ ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮದ ತಂಗಚ್ಚನ್ ಎಂಬವರ ಪುತ್ರ ಜೋಯಿ ಕೆ. ಎಂಬಾತನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(ಎಫ್.ಟಿ.ಎಸ್.ಸಿ.1) ಒಂದು ವರ್ಷ ಜೈಲು ಶಿಕ್ಷೆ ಮತ್ತು ಒಂದು ಸಾವಿರ ರೂ ದಂಡ ವಿಧಿಸಿದೆ.
ಜೋಯಿ ಎಂಬಾತ ತನ್ನ ಮಗಳ ಮೇಲೆ ದೌರ್ಜನ್ಯ ಎಸಗಿದ ಮತ್ತು ಓರ್ವ ಮಗಳ ತಲೆಗೆ ಕೈಯಿಂದ ಹೊಡೆದು ನೋವುಂಟು ಮಾಡಿದ್ದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ತನಿಖೆ ಪೂರ್ಣಗೊಳಿಸಿದ ಪೊಲೀಸ್ ಉಪನಿರೀಕ್ಷಕ ಕೆ. ಚಂದ್ರಶೇಖರ್ ಅವರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನಂತರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಆರೋಪಿ ತನ್ನ ಮಗಳ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪವನ್ನು ಸಾಬೀತು ಪಡಿಸಲು ಸೂಕ್ತ ಸಾಕ್ಷ್ಯಾಧಾರಗಳು ಇರಲಿಲ್ಲ. ಮಗಳ ತಲೆಗೆ ಹೊಡೆದು ಗಾಯಗೊಳಿಸಿರುವುದನ್ನು ಪ್ರಾಸಿಕ್ಯೂಶನ್ ಸಾಬೀತು ಪಡಿಸಿದ್ದು ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು ಮಗಳಿಗೆ ಹೊಡೆದು ನೋವುಂಟು ಮಾಡಿದ ಆರೋಪಕ್ಕೆ ಸಂಬಂಧಿಸಿ ಜೋಯಿಗೆ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ವಾದ ಮಂಡಿಸಿದ್ದರು.