ಕುಂದಾಪುರ, ನ 26 (DaijiworldNews/HR): ಕರ್ನಾಟಕದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ತರಬೇಕು ಎನ್ನುವ ಒಲವನ್ನು ಸಿಎಂ ವ್ಯಕ್ತಪಡಿಸಿದ್ದು, ನಮ್ಮ ಸರಕಾರ ಇದಕ್ಕೆ ಬದ್ಧವಾಗಿದೆ. ಮುಂದಿನ ಅಧಿವೇಶನದ ಸಂದರ್ಭ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡುತ್ತೇವೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಕೋಟದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಸಮಾನ ನಾಗರಿಕ ಸಂಹಿತೆ ವಿಷಯದಲ್ಲಿ, ಮುಖ್ಯಮಂತ್ರಿಗಳ ನಿಲುವನ್ನು ಸ್ವಾಗತಿಸುತ್ತೇವೆ. ಇದರಲ್ಲಿ ಯಾಕೆ ಬೇಕು ಎನ್ನುವ ಚರ್ಚೆ ಇಲ್ಲ. ಎಲ್ಲರೂ ಒಂದಾಗಿ ಯೋಚನೆ ಮಾಡಬೇಕು, ಎಲ್ಲರೂ ಒಂದಾಗಿ ಚಟುವಟಿಕೆ ಮಾಡಬೇಕು. ಪ್ರತ್ಯೇಕತೆಗಳು ಎಲ್ಲೂ ಕೂಡ ನಿರ್ಮಾಣ ಆಗಬಾರದು ಎಂಬುದು ಇದರ ಹಿಂದಿರುವ ಉದ್ದೇಶವಾಗಿದೆ ಎಂದರು. ಏಕರೂಪದ ಕಾನೂನು ಜಾರಿಗೆ ತರುತ್ತೇವೆ ಎಂದು ಬಿಜೆಪಿ ಹಲವು ವರ್ಷಗಳಿಂದ ಪ್ರಣಾಳಿಕೆಯಲ್ಲಿ ಹೇಳಿದೆ ಎಂದ ಅವರು ಇದನ್ನು ಜಾರಿಗೆ ತರಲು ಬೇರೆ ರಾಜ್ಯಗಳು ಈಗಾಗಲೇ ಮುಂದಾಗಿವೆ. ಕರ್ನಾಟಕ ರಾಜ್ಯ ಕೂಡ ಮುಂದಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಚಿಲುಮೆ ಕೋಲಾಹಲ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಈಗಾಗಲೇ ಇದನ್ನು ತನಿಖೆಗೆ ಒಳಪಡಿಸಿದ್ದೇವೆ. ತನಿಖೆ ಪ್ರಗತಿಯಲ್ಲಿದೆ. ಕೆಲವು ಜನರ ಬಂಧನ ಆಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬುಡಮೇಲು ಮಾಡುವುದಕ್ಕೆ ಯಾವುದೇ ಸಂಸ್ಥೆ ಮುಂದಾಗುವ ಪ್ರಶ್ನೆ ಇಲ್ಲ. ನಮ್ಮ ಸರಕಾರ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿದ್ದಾರೆ.