ಕುಂದಾಪುರ, ನ 26 (DaijiworldNews/HR): ಚಿಲುಮೆ ಸಂಸ್ಥೆಯ ಅವ್ಯವಹಾರದ ವಿಚಾರವಾಗಿ ಕೋಟದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ಪ್ರತಿಕ್ರಿಯೆ ನೀಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ಎಲ್ಲ ಕಾಲದಲ್ಲೂ ಆಗುತ್ತೆ. ಮತದಾರರ ಪಟ್ಟಿಯಲ್ಲಿ ಯಾವುದೇ ತಪ್ಪು-ಒಪ್ಪುಗಳಿದ್ದರೂ ಪರಿಷ್ಕರಣೆ ಆಗಬೇಕು. ಮತದಾರರಿಗೆ ಮತದಾನ ಮಾಡಲು ಯಾವುದೇ ಅಡಚಣೆ ಇರಬಾರದು. ಅರ್ಹತೆ ಇರುವ ಪ್ರತಿ ಭಾರತೀಯರೂ ಮತ ಚಲಾಯಿಸಬೇಕು. ನಾವು ಮತದಾರರ ಪಟ್ಟಿಯಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ಕೊಡಲ್ಲ ಎಂದರು.
ನಮ್ಮ ಸರ್ಕಾರ ಈ ವಿಚಾರದಲ್ಲಿ ಪಾರದರ್ಶಕವಾಗಿದೆ. ಮತದಾರರ ಪಟ್ಟಿಯಲ್ಲಿ ಗೊಂದಲ ಉಂಟು ಮಾಡುವುದು, ಅಕ್ರಮ ನಡೆಸುವುದು ಕಾಂಗ್ರೆಸ್ ಸಂಸ್ಕೃತಿ. ಈಗ ಪಾರದರ್ಶಕ ತನಿಖೆ ಆಗುತ್ತಿದೆ. ಎಲ್ಲರ ಮೇಲೂ ಕ್ರಮ ಕೈಗೊಳ್ಳಲಾಗುತ್ತಿದೆ. ಅಗತ್ಯವಿದ್ದರೆ ಮತ್ತಷ್ಟು ತನಿಖೆ ಮಾಡಿಸುತ್ತೇವೆ.
ಯಾವುದಾದರೂ ಸಂಘ ಸಂಸ್ಥೆಗಳು ಈ ರೀತಿಯ ಅಕ್ರಮ ಮಾಡಿದ್ದರೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಸಲಹೆ ಕೊಟ್ಟಿದ್ದೇನೆ. ಈ ಹಗರಣದಲ್ಲಿ ಯಾರಿದ್ದರೂ ಬಿಡಬೇಡಿ ಎಂದು ಹೇಳಿದ್ದೇನೆ. ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡಿರುವುದು ಸ್ವಾಗತಾರ್ಹ. ಮತದಾರರ ಸ್ವಾತಂತ್ರ್ಯ ರಕ್ಷಣೆಗೆ ಚುನಾವಣಾ ಆಯೋಗ ಇದೆ ಎಂದು ಹೇಳಿದರು.