ಕುಂದಾಪುರ, ನ 25 (DaijiworldNews/SM): ಅಕ್ರಮ ಸಕ್ರಮ ಹಾಗೂ 94 ಸಿ ಅಡಿ ಹಕ್ಕುಪತ್ರ ಹಂಚಿಕೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ಮುಂದಿದ್ದು, ಅರ್ಹರಿಗೆ ಆದ್ಯತೆ ಮೇರೆಗೆ ಹಕ್ಕುಪತ್ರ ನೀಡಲಾಗುವುದು. ಡೀಮ್ಡ್ ಅರಣ್ಯ ರಹಿತ ಜಾಗದ ಕಡತಗಳನ್ನು ಮೊದಲ ಹಂತದಲ್ಲಿ ವಿತರಿಸಲಾಗುವುದು ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.
ಅವರು ಕುಂದಾಪುರ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಬೈಂದೂರು ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿಯ ಮೂರನೇ ಸಭೆಯಲ್ಲಿ ಮಾತನಾಡಿದರು. ಈವರೆಗೆ 122 ಮಂದಿಗೆ ಹಕ್ಕುಪತ್ರ ನೀಡಲಾಗಿದ್ದು, ಇಂದು 54 ಕಡತಗಳ ವಿಲೇವಾರಿ ಮಾಡಲಾಗುತ್ತದೆ. 850 ಅರ್ಜಿಗಳು ಬಾಕಿ ಇವೆ ಎಂದರು.
94ಸಿ ಪ್ರಕರಣದಲ್ಲಿ ಶಂಕರನಾರಾಯಣ ಒಂದರಲ್ಲೇ 122 ಮಂದಿಗೆ ಹಕ್ಕುಪತ್ರ ನೀಡಲಾಗಿದೆ ಇನ್ನು 200ರಷ್ಟು ಅರ್ಜಿಗಳಿವೆ. ಮಿತಿಗಿಂತ ಕಡಿಮೆ ಕೃಷಿ ಭೂಮಿ ಇರುವವರಿಗೆ ಆದ್ಯತೆ ನೀಡಲಾಗುವುದು ಎಂದ ಅವರು,
ತನ್ನ ಕ್ಷೇತ್ರದಲ್ಲಿ ಹೆಚ್ಚುವರಿ 2 ಸಾವಿರ ಸೇರಿದಂತೆ 3200 ಮನೆಗಳನ್ನು ಮಂಜೂರು ಮಾಡಿಸಲಾಗಿದೆ. ವಿವೇಕ ಯೋಜನೆಯಲ್ಲಿ 39 ಶಾಲೆಗಳಿಗೆ ಕೊಠಡಿ ಮಂಜೂರಾಗಿದೆ. ಬೆಳಕು ಯೋಜನೆಯಲ್ಲಿ ಅರ್ಹ ಮನೆಗಳಿಗೆ ವಿದ್ಯುತ್ ನೀಡಲಾಗಿದೆ. ಕುಡಿಯುವ ನೀರು ಯೋಜನೆ ಜಾರಿಯಲ್ಲಿದೆ. ಕೃಷಿಗೆ ನೀರಾವರಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಕೊಡಚಾದ್ರಿಯಲ್ಲಿ ಕೇಬಲ್ ಕಾರ್ ನಿರ್ಮಾಣಕ್ಕೆ ಸಂಸದರ ಮೂಲಕ 1200 ಕೋ.ರೂ. ಮಂಜೂರಾತಿ ಪ್ರಕ್ರಿಯೆ, ಸ್ಥಳ ಪರಿಶೀಲನೆ ನಡೆದಿದ್ದು ಪರಿಸರಕ್ಕೆ ಹಾನಿಯಾಗದ ರೀತಿ ಯೋಜನೆ ಮಾಡಲಾಗುವುದು. ಮರವಂತೆ ಹಾಗೂ ಕೊಡಚಾದ್ರಿಯ ಕೇಬಲ್ ಕಾರ್ ಸಿದ್ಧವಾದರೆ ಉಡುಪಿ ಜಿಲ್ಲೆ ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮದ ಮೂಲಕ ನೂರಾರು ಜನರಿಗೆ ಉದ್ಯೋಗ ದೊರೆಯಲಿದೆ ಎಂದರು.