ಮಂಗಳೂರು, ನ 25 (DaijiworldNews/DB): ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಖಾದಿ ಉತ್ಸವ-2022ವನ್ನು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನವೆಂಬರ್ 26ರಿಂದ ಡಿಸೆಂಬರ್ 10ರವರೆಗೆ ಆಯೋಜಿಸಲಾಗಿದೆ ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಕೆ.ವಿ. ನಾಗರಾಜು ತಿಳಿಸಿದ್ದಾರೆ.
ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ನವೆಂಬರ್ 26ರ ಶನಿವಾರ ಬೆಳಗ್ಗೆ 10 ಗಂಟೆಗೆ ಖಾದಿ ಉತ್ಸವಕ್ಕೆ ಚಾಲನೆ ನೀಡುವರು. ಖಾದಿ ವಸ್ತು ಪ್ರದರ್ಶನ ಮಳಿಗೆಯನ್ನು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎನ್. ನಾಗರಾಜು ಉದ್ಘಾಟಿಸುವರು. ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನೆಯನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಖಾದಿ ನಡೆದ ಬಂದ ದಾರಿ ಚಿತ್ರ ಪ್ರಾತ್ಯಕ್ಷಿಕೆಯನ್ನು ಸಚಿವ ಎಸ್. ಅಂಗಾರ ಉದ್ಘಾಟಿಸುವರು ಎಂದರು.
2021-22ನೇ ಸಾಲಿನಲ್ಲಿ ಪಿಎಎಂಇಜಿಪಿಯಡಿ 195 ಘಟಕಗಳಿಗೆ ಹಾಗೂ 22-23ನೇ ಸಾಲಿನಲ್ಲಿ ಈವರೆಗೆ 91 ಘಟಕಗಳಿಗೆ ಪ್ರೋತ್ಸಾಹಧನ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ರಾಜ್ಯ ಮಟ್ಟದಲ್ಲಿ ಗುರಿ ಸಾಧನೆಯಲ್ಲಿ ಮೊದಲಿದೆ ಎಂದು ತಿಳಿಸಿದರು.
ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ವಿ. ನಾಗರಾಜ ಮಾತನಾಡಿ, ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ 75 ಮಳಿಗೆ ಹಾಕಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳ ಪರಂಪರಾಗತ ಶೈಲಿಯ, ಪರಿಸರ ಸಹ್ಯ, ಸರಳ ಖಾದಿ ಉಡುಪುಗಳೊಂದಿಗ ಆಧುನಿಕತೆಯ ಮೆರಗನ್ನು ಹೊಂದಿದ ಅರಳೆ ಖಾದಿ, ಪಾಲಿವಸ್ತ್ರ ಖಾದಿ, ಉಣ್ಣೆಖಾದಿ ಹಾಗೂ ರೇಷ್ಮೆ ಖಾದಿ ಉಡುಪುಗಳು ಮತ್ತು ಉತ್ತರ ಭಾರತದ ಖಾದಿ ರೇಷ್ಮೆ ಉತ್ಪನ್ನಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿರುತ್ತದೆ ಎಂದು ತಿಳಿಸಿದರು.
ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ನಿರ್ದೇಶಕ ಮಾಧವ ಶೆಟ್ಟಿಗಾರ್, ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ ನಾಗಜ್ಯೋತಿ ವಿ. ನಾಯ್ಕ್, ರಾಘವೇಂದ್ರ ಅಡಿಗ, ವಿ. ಅಣ್ಣಪ್ಪ, ಮಲ್ಲಿಕಾರ್ಜುನ, ವಿದ್ಯಾ, ಇ. ಗೋಷ್ಠಿಯಲ್ಲಿದ್ದರು.