ಮಂಗಳೂರು, ನ 25 (DaijiworldNews/DB): ಕರಾವಳಿಯ ಭದ್ರತೆಗೆ ಸವಾಲೊಡ್ಡುವ ಭಯೋತ್ಪಾದನೆ ಸೇರಿದಂತೆ ವಿವಿಧ ವಿಧ್ವಂಸಕ ಕೃತ್ಯಗಳ ವಿರುದ್ಶ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಂಗಳೂರು ನಗರದ ಪ್ರಮುಖ 7 ಜಂಕ್ಷನ್ಗಳಲ್ಲಿ ಭಿತ್ತಿಪತ್ರ ಪ್ರದರ್ಶನದ ಮೂಲಕ ಜನಜಾಗೃತಿ ಸಭೆ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ತಿಳಿಸಿದೆ.
ವಿಶ್ವ ಹಿಂದೂ ಪರಿಷತ್ ಮತ್ತು ಯುವ ಸಂಘಟನೆಗಳಾದ ಬಜರಂಗದಳ ಮತ್ತು ದುರ್ಗಾವಾಹಿನಿ ಮುಖಾಂತರ ಕಾರ್ಯಕ್ರಮ ನಡೆಯಲಿದೆ. ಜ್ಯೋತಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ತೊಕ್ಕೊಟ್ಟು ಜಂಕ್ಷನ್, ಉರ್ವಸ್ಟೋರ್ ಜಂಕ್ಷನ್, ಕಾವೂರು ಜಂಕ್ಷನ್, ಮೂಡಬಿದ್ರೆ ಜಂಕ್ಷನ್, ಸುರತ್ಕಲ್ ಮತ್ತು ಗುರುಪುರ ಜಂಕ್ಷನ್ನಲ್ಲಿ ಭಿತ್ತಿಪತ್ರ ಪ್ರದರ್ಶನ ನಡೆಯಲಿದೆ ಎಂದು ವಿಹಿಂಪ ಮುಖಂಡ ಶಿವಾನಂದ ಮೆಂಡನ್ ತಿಳಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಮಂಗಳೂರು ಸೇರಿದಂತೆ ಕರಾವಳಿಯನ್ನು ಭಯೋತ್ಪಾದಕತೆಯ ಮುಖಾಂತರ ಇಸ್ಲಾಮಿಕ್ ಸಾಮ್ರಾಜ್ಯ ನಿರ್ಮಾಣ ಮಾಡಲು ಪ್ರಯತ್ನಿಸಲಾಗುತ್ತಿದೆ. ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಡ್ರಗ್ಸ್ ಜಿಹಾದ್, ಸೆಕ್ಸ್ ಜಿಹಾದ್, ಗೋ ಮಾಫಿಯಾ ಇವೆಲ್ಲವೂ ಭಯೋತ್ಪಾದಕತೆಯ ಒಂದೊಂದು ಮುಖಗಳು, ಈ ಕೃತ್ಯಗಳ ಮುಖಾಂತರ ಹಿಂದುಗಳನ್ನು ಮತ್ತು ಹಿಂದೂ ಶೃದ್ಧಾ ಕೇಂದ್ರಗಳನ್ನು ಗುರಿಯಾಗಿಟ್ಟುಕೊಂಡು, ನಮ್ಮ ಭಾಗದ ಭದ್ರತೆಗೆ ಸವಾಲೊಡ್ಡುತ್ತಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ.
ಕರಾವಳಿಯ ಪ್ರಮುಖ ಭಾಗಗಳಲ್ಲಿ ಈಗಾಗಲೇ ಉಗ್ರರು ಸ್ಲೀಪರ್ ಸೆಲ್ ಮುಖಾಂತರ ಸಕ್ರಿಯವಾಗಿದ್ದು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಬಾರಿ ಸಂಚು ರೂಪಿಸುತ್ತಿದ್ದಾರೆ. ಇದೀಗ ನಗರದಲ್ಲಿ ಆಟೋದಲ್ಲಿ ಬಾಂಬ್ ಸ್ಫೋಟಿಸುವ ಮೂಲಕ ಕರಾವಳಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಈ ರೀತಿಯ ದೇಶ ವಿರೋಧಿ ಕೃತ್ಯದ ವಿರುದ್ಧ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದವರು ವಿವರಿಸಿದ್ದಾರೆ.