ಮಂಗಳೂರು,ನ 25 (DaijiworldNews/MS): ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಹಿಂದೆ ಜಾಗತಿಕ ಸಂಚು ಅಡಗಿದೆ. ಈ ಘಟನೆ ಹಿಂದೆ ಯಾರಿದ್ದಾರೆ ಎನ್ನುವುದನ್ನು ಪತ್ತೆಹಚ್ಚಲು ಹಾಗೂ ಇದರ ಆಳ ಮತ್ತು ಅಗಲವನ್ನು ಅರಿತು, ಈ ಪ್ರಕರಣವನ್ನು ಸಂಪೂರ್ಣವಾಗಿ ಭೇದಿಸುವ ಉದ್ದೇಶದಿಂದ ಇದರ ತನಿಖೆಯನ್ನು ರಾಷ್ಟ್ರೀಯ ತನಿಖೆ ಸಂಸ್ಥೆಗೆ ಹಸ್ತಾಂತರ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ಕುಕ್ಕರ್ ಬಾಂಬ್ ಸ್ಫೋಟಗೊಂಡ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ಅವರು ಬಳಿಕ ಮಾದ್ಯಮದೊಂದಿಗೆ ಮಾತನಾಡಿದ್ದು,ಈ ಘಟನೆಯನ್ನು ಅತ್ಯಂತ ಉಗ್ರವಾಗಿ ಖಂಡಿಸುತ್ತೇನೆ ಸಮಾಜದಲ್ಲಿ ಭಯವನ್ನುಂಟು ಮಾಡುವ ಸಂಘಟನೆಗಳ ಬಗ್ಗೆ ನಮ್ಮ ಸರ್ಕಾರ ಮೃದು ಧೋರಣೆಯನ್ನು ತೆಗೆದುಕೊಳ್ಳುವುದಿಲ್ಲ. ಇದಲ್ಲದೆ ರಾಷ್ಟ್ರೀಯ ತನಿಖೆ ಸಂಸ್ಥೆ ಮೇಲೆ ಹಾಗೂ ಪೊಲೀಸರ ಮೇಲೆ ವಿಶ್ವಾಸ ಇದ್ದು. ಇಂತಹ ಸಂಘಟನೆಗಳು ಮತ್ತೆ ಚಿಗುರೊಡೆಯಲಿಕ್ಕೆ ಅವರು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಸ್ಫೋಟದಿಂದ ಗಾಯಗೊಂಡಿರುವ ರಿಕ್ಷಾ ಚಾಲಕ ಪುರುಷೋತ್ತಮ ಅವರ ಚಿಕಿತ್ಸೆ ವೆಚ್ಚವನ್ನು ಜನಪ್ರತಿನಿಧಿಗಳು ಸೇರಿ ಬಿಜೆಪಿಯಿಂದ ಭರಿಸಲಿದ್ದೇವೆ. ಅವರಿಗೆ ಸರ್ಕಾರದಿಂದ ಪರಿಹಾರ ನೀಡುವುದಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ಅಶ್ವಾಸನೆ ನೀಡಿದ್ದಾರೆ.
ಈ ವೇಳೆ ಮೇಯರ್ ಜಯಾನಂದ ಅಂಚನ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಅವರು ಜೊತೆಯಲ್ಲಿದ್ದರು.