ಮಂಜೇಶ್ವರ, ಫೆ 25(SM): 2016ರಲ್ಲಿ ನಡೆದ ಕೇರಳ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರದಿಂದ ಅಕ್ರಮ ಮತದಾನದಿಂದ ಯುಡಿಎಫ್ ಅಭ್ಯರ್ಥಿಯಾಗಿದ್ದ ಮುಸ್ಲಿಂ ಲೀಗ್ ನ ಪಿ.ಬಿ. ಅಬ್ದುಲ್ ರಜಾಕ್ ಗೆಲುವು ಸಾಧಿಸಿದ್ದಾರೆಂದು ಆರೋಪಿಸಿ ಪರಾಜಿತ ಅಭ್ಯರ್ಥಿ ಬಿಜೆಪಿಯ ಕೆ. ಸುರೇಂದ್ರ ನ್ ಹೈಕೋರ್ಟ್ ಗೆ ಸಲ್ಲಿಸಿದ್ದ ದಾವೆಯನ್ನು ಹಿಂತೆಗೆದುಕೊಳ್ಳಲು ತೀರ್ಮಾನಿಸಿದ್ದು, ಇದರಿಂದ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸನ್ನಿಹಿತವಾಗಿದೆ.
ಲೋಕಸಭಾ ಚುನಾವಣೆ ಜೊತೆ ಮಂಜೇಶ್ವರ ಕ್ಷೇತ್ರದ ಉಪಚುನಾವಣೆ ನಡೆಯುವ ಸಾಧ್ಯತೆ ಇದೆ. 2016ರಲ್ಲಿ ನಡೆದ ಚುನಾವಣೆಯಲ್ಲಿ ಪಿ. ಬಿ ಅಬ್ದುಲ್ ರಜಾಕ್ ಕೇವಲ ೮೯ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇದನ್ನು ಪ್ರಶ್ನಿಸಿ ಕೆ. ಸುರೇಂದ್ರನ್ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಮೃತಪಟ್ಟವರು ಮತ್ತು ವಿದೇಶದಲ್ಲಿದ್ದವರು ಸೇರಿದಂತೆ ೨೬೫ ಮಂದಿ ನಕಲಿ ಮತದಾನ ಮಾಡಿದ್ದಾರೆ ಎಂದು ಹೈಕೋರ್ಟ್ ಮೆಟ್ಟಲೇರಿದ್ದು, ವಿಚಾರಣೆ ಹಂತ ಹಂತವಾಗಿ ನಡೆದಿದೆ.
೬೫ ಸಾಕ್ಷಿಗಳಿಗೆ ನೋಟಿಸ್ ನೀಡಿದರೂ ವಿಚಾರಣೆಗೆ ಹೈಕೋರ್ಟ್ ಗೆ ಹಾಜರಾಗಲಿಲ್ಲ. ಈ ನಡುವೆ ಶಾಸಕ ಪಿ.ಬಿ. ಅಬ್ದುಲ್ ರಜಾಕ್ ಕಳೆದ ಅಕ್ಟೊಬರ್ ನಲ್ಲಿ ನಿಧನರಾಗಿದ್ದು, ಇದರಿಂದ ಸುರೇಂದ್ರನ್ ಹೂಡಿದ್ದ ದಾವೆ ಕುತೂಹಲ ಮೂಡಿಸಿತ್ತು.
ದಾವೆ ಹಿಂತೆಗೆದು ಕೊಂಡಲ್ಲಿ ಏಪ್ರಿಲ್ 20ರೊಳಗೆ ಉಪಚುನಾವಣೆ ನಡೆಯಬೇಕಿತ್ತು. ಆದರೆ ದಾವೆಯನ್ನು ಹಿಂತೆಗೆದುಕೊಳ್ಳಲು ಸುರೇಂದ್ರನ್ ಮುಂದಾಗದಿದ್ದರಿಂದ ಉಪಚುನಾವಣೆಯ ಸಾಧ್ಯತೆ ಕ್ಷೀಣಿಸಿತ್ತು.
ಮಂಜೇಶ್ವರದಲ್ಲಿ ಶಾಸಕರಿಲ್ಲದಿರುವುದು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಉಂಟಾಗಿತ್ತು. ಯುಡಿಎಫ್ ಬಿಜೆಪಿಗೆ ಸವಾಲು ಹಾಕಿತ್ತು. ಸೋಲಿನ ಭಯದಿಂದ ಕೇಸನ್ನು ಹಿಂಪಡೆಯಲು ಬಿಜೆಪಿ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿತ್ತು.
ಕೊನೆಗೆ ಇದೀಗ ಸುರೇಂದ್ರನ್ ದಾವೆ ಹಿಂತೆಗೆಯಲು ತೀರ್ಮಾನಿಸಿದ್ದು, ಎರಡು ದಿನಗಳಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸುವರು. ಬಹುತೇಕ ಲೋಕಸಭಾ ಚುನಾವಣೆ ಜೊತೆ ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೂ ಉಪಚುನಾವಣೆ ನಡೆಯುವ ಸಾಧ್ಯತೆ ಇದೆ.