ಮಂಗಳೂರು,ಫೆ 25(MSP): ಕಡಲ ನಗರಿಯಲ್ಲಿ ಇನ್ಮುಂದೆ ಬಸ್ಗಾಗಿ ಪ್ರಯಾಣಿಕರು ರಸ್ತೆ ಬದಿ ಬಿಸಿಲಲ್ಲಿ ಇನ್ನು ಗಂಟೆಗಟ್ಟಲೆ ಕಾಯಬೇಕಿಲ್ಲ. ಯಾಕೆಂದರೆ ಯಾವ ನಂಬರ್ ಬಸ್ ಎಷ್ಟು ಹೊತ್ತಿಗೆ ಬರುತ್ತೆ ಎನ್ನುವುದನ್ನು ಲೈವ್ ಆಗಿ ವೀಕ್ಷಿಸಬಹುದಾಗಿದೆ. ಇದಕ್ಕಾಗಿ ಮಂಗಳೂರು ಸಿಟಿ ಬಸ್ ಪ್ರಯಾಣಿಕರಿಗಾಗಿ, ’ಚಲೋ’ ಆ್ಯಪ್ ಹೊರತಂದಿದ್ದು ಇಂದಿನಿಂದಲೇ ಇದು ಕಾರ್ಯಾಚರಿಸಲಿದೆ.
ಓಲಾ ಮಾದರಿಯಲ್ಲಿ ‘ಚಲೋ ಆ್ಯಪ್’ ಇರಲಿದ್ದು, ಜಿಲ್ಲಾ ಬಸ್ ಮಾಲಕರ ಸಂಘ ಮತ್ತು ಚಲೋ ಸಂಸ್ಥೆಯ ಸಹಯೋಗದೊಂದಿಗೆ ಈ ಆ್ಯಪ್ ನಿರ್ಮಿಸಲಾಗಿದೆ. ನಗರದಲ್ಲಿ ಸದ್ಯ 340 ಸಿಟಿ ಬಸ್ ಗಳು ಸಂಚರಿಸುತ್ತಿದ್ದು ಪೂರ್ವಭಾವಿಯಾಗಿ320 ಬಸ್ಗಳಲ್ಲಿ ಜಿಪಿಎಸ್ ಅಳವಡಿಸಲಾಗಿದೆ.
ಏನಿದು ಚಲೋ ಆ್ಯಪ್?
ಚಲೋ ಆ್ಯಪ್ ಓಲಾ ಕ್ಯಾಬ್ನ ಆ್ಯಪ್ ರೀತಿ ಕಾರ್ಯನಿರ್ವಹಿಸುತ್ತದೆ. ಆ್ಯಪ್ಗೆ ಎಲ್ಲ ಬಸ್ಗಳಲ್ಲಿ ಅಳವಡಿಸಿರುವ ಜಿಪಿಎಸ್ ಸಂಪರ್ಕ ಇರುತ್ತದೆ. ಪ್ರಯಾಣಿಸಬೇಕಾದ ರೂಟ್ ನಂಬರ್ ಅಥವಾ ಬಸ್ ಹೆಸರನ್ನು ಆ್ಯಪ್ನಲ್ಲಿ ನಮೂದಿಸಿದಾಗ ಬಸ್ ಸದ್ಯ ಎಲ್ಲಿದೆ, ಎಷ್ಟು ಹೊತ್ತಿಗೆ ತಾನಿರುವ ಸ್ಥಳಕ್ಕೆ ಬರಲಿದೆ ಎಂಬ ಮಾಹಿತಿ ಸಿಗುತ್ತದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಆ್ಯಪ್ ಲಭ್ಯವಿದೆ. ಇದಲ್ಲದೆ ಈ ಆ್ಯಪ್ ನಲ್ಲಿ ತುರ್ತು ಸಂದರ್ಭಗಳಲ್ಲಿ ಕುಟುಂಬ ಮತ್ತು ಮಿತ್ರರೊಂದಿಗೆ ತಕ್ಷಣ ಸೂಚನೆ ನೀಡಲು ಎಸ್ ಓ ಎಸ್ ತಂತ್ರಜ್ಞಾನ ಕೂಡಾ ಆ್ಯಪ್ ನಲ್ಲಿದೆ.