ಸುರತ್ಕಲ್, ನ 23 (DaijiworldNews/SM): ಸುರತ್ಕಲ್ ಟೋಲ್ಗೇಟ್ ವಿರೋಧಿ ಹೋರಾಟಗಾರರು ತಮ್ಮ ಹೋರಾಟವನ್ನು ಮುಂದುವರೆಸಿದ್ದು, ಈ ಭಾಗದಲ್ಲಿ ಉಡುಪಿಗೆ ತೆರಳಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ ಬಗ್ಗೆ ವರದಿಯಾಗಿದೆ.
ಬುಧವಾರದಂದು ಬಾಂಬ್ ಸ್ಪೋಟ ಪ್ರಕರಣದ ತನಿಖೆ ಹಾಗೂ ಸ್ಥಳ ಪರಿಶೀಲನೆ ಹಿನ್ನೆಲೆಯಲ್ಲಿ ಮಂಗಳೂರಿಗೆ ಗೃಹ ಸಚಿವರು ಆಗಮಿಸಿದ್ದರು. ಬಳಿಕ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಉಡುಪಿಯತ್ತ ಪ್ರಯಾಣ ಬೆಳೆಸಿದ್ದರು. ಈ ವೇಳೆ ಗೃಹ ಸಚಿವರು ಸುರತ್ಕಲ್ ತಲುಪುತ್ತಿದ್ದಂತೆ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಹೋರಾಟಗಾರರು ಯತ್ನಿಸಿದರು. ಮತ್ತೊಂದೆಡೆ ಸುರತ್ಕಲ್ ಸಮೀಪದಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ನಡೆಸಿತ್ತು.
ಈ ಹಿನ್ನೆಲೆಯಲ್ಲಿ ಧರಣಿ ಸ್ಥಳದಲ್ಲೇ ಕುಳಿತು ಹೋರಾಟಗಾರರು ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿದರು. ಇನ್ನು ಪೊಲೀಸರು ಮುನ್ನೆಚ್ಚರಿಕೆ ವಹಿಸಿದ ಹಿನ್ನೆಲೆಯಲ್ಲಿ ಗೃಹ ಸಚಿವರ ಸಂಚಾರಕ್ಕೆ ಯಾವುದೇ ಅಡಚಣೆಯಾಗಲಿಲ್ಲ.