ಮಂಗಳೂರು, ನ 23 (DaijiworldNews/DB): ಗೋಡೆ ಬರಹ ಪ್ರಕರಣದ ಆರೋಪಿಯಾಗಿದ್ದ ಶಾರೀಕ್ ಹಿಂದೂ ಹೆಸರನ್ನು ಬಳಸಿಕೊಂಡು ನಕಲಿ ಐಡಿಗಳನ್ನಿಟ್ಟುಕೊಂಡು ಹಿಂದೂ ಸೋಗಿನಲ್ಲಿ ಓಡಾಡುತ್ತಿದ್ದ ಕಾರಣ ಆತನನ್ನು ಪತ್ತೆ ಹಚ್ಚುವುದು ತ್ರಾಸದಾಯಕವಾಗಿತ್ತು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಮಂಗಳೂರಿನಲ್ಲಿ ಕುಕ್ಕರ್ ಸ್ಪೋಟ ಪ್ರಕರಣದ ಆರೋಪಿ ಈ ಹಿಂದೆ ಗೋಡೆ ಬರಹ ಪ್ರಕರಣದಲ್ಲಿಯೂ ಆರೋಪಿಯಾಗಿದ್ದ. ಆದರೆ ಆತ ಹಿಂದೂ ಹೆಸರಿನಲ್ಲಿ ನಕಲಿ ಐಡಿ ಇಟ್ಟುಕೊಂಡು ಓಡಾಡುತ್ತಿದ್ದ. ಆಗಾಗ ತನ್ನ ವಾಸಸ್ಥಾನವನ್ನೂ ಬದಲಾಯಿಸುತ್ತಿದ್ದ. ಹೀಗಾಗಿ ಆತನ ಮೇಲೆ ಅನುಮಾನ ಬಂದಿರಲಿಲ್ಲ. ಆತನನ್ನು ಪತ್ತೆ ಹಚ್ಚುವುದು ಇದರಿಂದ ಹೆಚ್ಚು ಕಷ್ಟವಾಗಿತ್ತು ಎಂದರು.
ಈತ ಈ ಹಿಂದೆ ಜಾಮೀನಿನ ಮೇಲೆ ಹೊರ ಬಂದ ಬಳಿಕ ಪೊಲೀಸರು ತೀರ್ಥಹಳ್ಳಿಯಲ್ಲಿ ಕೆಲವು ದಿನ ಈತನ ಮೇಲೆ ಕಣ್ಣಿಟ್ಟಿದ್ದರು. ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಅನ್ಯರಾಜ್ಯಗಳಿಗೆ ಹೋಗಿದ್ದ ಎಂದವರು ತಿಳಿಸಿದರು.
ಪ್ರಕರಣದ ತನಿಖೆಯನ್ನು ಎನ್ಐಎಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಮುಂದಿನ ಎರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಇನ್ನು ಮಂಗಳೂರಿನಲ್ಲಿ ಎನ್ಐಎ ಘಟಕ ಸ್ಥಾಪನೆಯ ಬೇಡಿಕೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ಈಗಾಗಲೇ ತರಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತೀರ್ಥಹಳ್ಳಿ ಭಯೋತ್ಪಾದಕರ ಹಬ್ ಆಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಲವು ಸಾಹಿತಿ, ರಾಜಕಾರಣಿಗಳನ್ನು ಕೊಟ್ಟ ಊರದು. ಕರಾವಳಿ ಮತ್ತು ಕೇರಳದ ಲಿಂಕ್ನಿಂದಾಗಿ ಕೆಲವರು ಇಂತಹ ಚಟುವಟಿಕೆ ಮಾಡುತ್ತಿದ್ದಾರೆ. ಭಯೋತ್ಪಾದನೆ ನಿರ್ಮೂಲನೆಗೆ ಕೇಂದ್ರ, ರಾಜ್ಯ ಸರ್ಕಾರಗಳು ಗಮನ ಹರಿಸಿದ್ದು, ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿದೆ ಎಂದರು.
ಆರೋಪಿ ಶಾರೀಕ್ ಆರೋಗ್ಯ ಸುಧಾರಣೆಯಾದ ಬಳಿಕವಷ್ಟೇ ಆತನ ವಿಚಾರಣೆ ಸಾಧ್ಯವಾಗಲಿದೆ. ಎಂಟು ಮಂದಿ ತಜ್ಞ ವೈದ್ಯರು ಆತನಿಗೆ ಚಿಕಿತ್ಸೆ ನೀಡುತ್ತಿದ್ದು, ಎಲ್ಲಾ ವೈದ್ಯರೊಂದಿಗೆ ಮಾತನಾಡಿದ್ದೇನೆ. ಇನ್ನು ಘಟನೆಯಿಂದ ಗಾಯಗೊಂಡ ರಿಕ್ಷಾ ಚಾಲಕರ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರ ಭರಿಸಲಿದೆ. ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುವ ಬಗ್ಗೆ ಮುಂದೆ ನಿರ್ಣಯಿಸುತ್ತೇನೆ ಎಂದು ತಿಳಿಸಿದರು.
ಡಿಜಿಪಿ ಪ್ರವೀಣ್ ಸೂದ್ ಮಾತನಾಡಿ, ಕೃತ್ಯ ಎಸಗಿದ ಆರೋಪಿಗಳ ಹಣಕಾಸಿನ ಮೂಲದ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ತನಿಖಾ ಹಂತದಲ್ಲಿರುವ ಕಾರಣದಿಂದ ಅದನ್ನು ಬಹಿರಂಗಪಡಿಸುವುದು ಸಾಧ್ಯವಿಲ್ಲ ಎಂದು ವಿವರಿಸಿದರು.
ತಮಿಳುನಾಡು, ಕೇರಳ ಸೇರಿದಂತೆ ವಿವಿಧೆಡೆ ತನಿಖೆ ನಡೆಯುತ್ತಿದ್ದು, ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು. ಈಗಾಗಲೇ ಬೆಂಗಳೂರು ಸೇರಿದಂತೆ ಎಂಟು ಕಡೆಗಳಲ್ಲಿ ದಾಳಿ ನಡೆಸಿ ನಾಲ್ವರನ್ನು ವಶಪಡಿಸಿಕೊಂಡಿದ್ದೇವೆ. ತನಿಖೆಗಾಗಿ ಇವರನ್ನೆಲ್ಲ ವಶಕ್ಕೆ ಪಡೆಯುತ್ತೇವೆಯೇ ಹೊರತು ಅವರು ಆರೋಪಿಗಳೆಂದಲ್ಲ ಮತ್ತು ಅವರನ್ನು ಬಂಧಿಸುವಕ್ಕಾಗಿಯೂ ಅಲ್ಲ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.