ಮಂಗಳೂರು, ನ 22 (DaijiworldNews/DB): ವಿಡಿಯೋ ಒಂದರಲ್ಲಿ ಇಬ್ಬರು ವ್ಯಕ್ತಿಗಳು ಬ್ಯಾಗ್ನೊಂದಿಗೆ ಓಡಾಡುತ್ತಿರುವ ದೃಶ್ಯವಿದ್ದು, ಮಂಗಳೂರು ನಗರದಲ್ಲಿ ನಡೆದ ಸ್ಟೋಟ ಪ್ರಕರಣದಲ್ಲಿ ಭಾಗಿಯಾಗಿರುತ್ತಾರೆ ಎಂಬುದಾಗಿ ಸುದ್ದಿ ಹರಿದಾಡುತ್ತಿದ್ದು, ಈ ವಿಡಿಯೋಗೂ ಮಂಗಳೂರಿನಲ್ಲಿ ನಡೆದ ಸ್ಟೋಟ ಪ್ರಕರಣಕ್ಕೂ ಸಂಬಂಧವಿರುವುದಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಇಬ್ಬರು ವ್ಯಕ್ತಿಗಳು ಓಡಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದನ್ನು ಸ್ಪೋಟ ಪ್ರಕರಣದ ಆರೋಪಿ ಮತ್ತು ಆತನೊಂದಿಗೆ ಇನ್ನೊಬ್ಬ ವ್ಯಕ್ತಿ ಇದ್ದ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಅಸಲಿಗೆ ಆ ವೀಡಿಯೋಗೂ, ಘಟನೆಗೂ ಯಾವುದೇ ಸಂಬಂಧವಿಲ್ಲ. ಅದು ರೈಲು ನಿಲ್ದಾಣದ ಬಳಿಯ ಸ್ಥಳವಾದ್ದರಿಂದ ಯಾರೋ ಪ್ರಯಾಣಿಕರು ಓಡಾಡುತ್ತಿರುವುದನ್ನು ಘಟನೆಯೊಂದಿಗೆ ತಳುಕು ಹಾಕಲಾಗುತ್ತಿದೆ. ಇದು ಸೂಕ್ಷ್ಮ ವಿಚಾರವಾಗಿರುವುದರಿಂದ ಸಾರ್ವಜನಿಕರು ಪರಿಶೀಲಿಸದ ಇಂತಹ ವೀಡಿಯೋಗಳನ್ನು ನಂಬಬಾರದು ಎಂದವರು ಮನವಿ ಮಾಡಿದ್ದಾರೆ.
ಈ ಘಟನೆ ಬಳಿಕ ಮಂಗಳೂರು ನಗರ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ನಿಗಾ ಇಡಲಾಗುತ್ತಿದೆ. ಧಾರ್ಮಿಕ ಕೇಂದ್ರ, ಮಾಲ್ಗಳು, ಜನನಿಬಿಡ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗುವುದು. ಶ್ವಾನ ದಳದಿಂದಲೂ ಪರಿಶೀಲನೆ ನಡೆಯಲಿದೆ ಎಂದವರು ತಿಳಿಸಿದರು.
ಘಟನೆಯಲ್ಲಿ ಗಾಯಗೊಂಡ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಆರೋಪಿಗೆ ಗಂಭೀರ ಗಾಯಗಳಾಗಿರುವುದರಿಂದ ಚಿಕಿತ್ಸೆ ನಡೆಯುತ್ತಿದೆ. ಸದ್ಯ ಆತ ಮಾತನಾಡುವ ಪರಿಸ್ಥಿತಿಯಲ್ಲಿಲ್ಲದ ಕಾರಣ ಏನೂ ಮಾಹಿತಿಗಳನ್ನು ಪಡೆದುಕೊಳ್ಳಲಾಗುತ್ತಿಲ್ಲ. ಆತ ಚೇತರಿಸಿಕೊಂಡಿರುವ ಬಗ್ಗೆ ವೈದ್ಯರಿಂದ ಅಧಿಕೃತಗೊಂಡ ಬಳಿಕ ಆತನ ವಿಚಾರಣೆ ನಡೆಯಲಿದೆ ಎಂದರು.