ಮಂಗಳೂರು, ನ 22 (DaijiworldNews/MS): ಮಂಗಳೂರಿನ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆ ಬಳಿ ಆಟೋದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ (55) ಅವರಿಗೆ " ಸರ್ಕಾರದಿಂದ ಪರಿಹಾರ ನೀಡಲು ಜಿಲ್ಲಾಡಳಿತ ಶಿಫಾರಸು ಮಾಡಲಿದೆ" ಎಂದು ದ. ಕ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ತಿಳಿಸಿದ್ದಾರೆ.
ಸ್ಪೋಟದಿಂದ ಗಾಯಗೊಂಡ ಪುರುಷೋತ್ತಮ ಪೂಜಾರಿ, ಸುಮಾರು 25 ವರ್ಷಗಳಿಂದ ಆಟೋ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದು ಇದರಿಂದ ಜೀವನ ನಡೆಸುತ್ತಿದ್ದರು. ಗೋರಿಗುಡ್ಡ ನಿವಾಸಿಯಾಗಿರುವ ಇವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಹಿರಿಯ ಪುತ್ರಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು , ಕಿರಿಯ ಪುತ್ರಿ ಸಿಎ ಪರೀಕ್ಷೆ ಬರೆದಿದ್ದಾರೆ.
ಕುಟುಂಬಕ್ಕೆ ಆಟೋ ರಿಕ್ಷಾವೇ ಆಧಾರವಾಗಿತ್ತು. ಘಟನೆಯಿಂದ ಆಟೋಗೆ ಹಾನಿಯಾಗಿದ್ದು ಮಾತ್ರವಲ್ಲದೇ ತನಿಖೆಯಿಂದ ಸದ್ಯ ಪೊಲೀಸರು ವಾಪಾಸು ಕೊಡುವ ಸಾಧ್ಯತೆ ಇಲ್ಲ. ಇನ್ನೊಂದೆಡೆ ಹಿರಿಯ ಮಗಳಾ ಮದುವೆ ನಿಶ್ವಯವಾಗಿದ್ದು ಇಂತಹ ಸಂದರ್ಭದಲ್ಲೇ ಘಟನೆ ನಡೆದಿರುವುದು ಕುಟುಂಬವನ್ನು ಕಂಗೆಡಿಸಿದೆ.
ಸ್ಪೋಟದಿಂದ ಗಾಯಗೊಂಡ ಆಟೋರಿಕ್ಷಾ ಚಾಲಕ ಪುರುಷೋತ್ತಮರಿಗೆ ಸರ್ಕಾರದಿಂದ ಪರಿಹಾರ ನೀಡಲು ಅವಕಾಶವಿದ್ದು ಹೀಗಾಗಿ ಈ ಬಗ್ಗೆ ಜಿಲ್ಲಾಡಳಿತ ಶಿಫಾರಸು ಮಾಡಲಿದೆ ಎಂದು ಡಿಸಿ ತಿಳಿಸಿದ್ದಾರೆ.