ಬಂಟ್ವಾಳ, ನ. 21 (DaijiworldNews/SM) : ಜನರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುವುದನ್ನು ತಪ್ಪಿಸಿ ಅಧಿಕಾರಿಗಳ ವರ್ಗಕ್ಕೆ ಚುರುಕು ಮುಟ್ಟಿಸುವುದರ ಜತೆಗೆ ಗ್ರಾಮಸ್ಥರ ಸಮಸ್ಯೆಗೆ ಶೀಘ್ರ ಸ್ಪಂದನೆ ನೀಡುವ ನಿಟ್ಟಿನಲ್ಲಿ ಜನಸ್ಪಂದನ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.
ಅಲ್ಲಿಪಾದೆ ಶ್ರೀರಾಮ ಭಜನಾ ಮಂದಿರದ ಸಭಾಂಗಣದಲ್ಲಿ ಸರಪಾಡಿ ಜಿ.ಪಂ ವ್ಯಾಪ್ರಿಯ ಸರಪಾಡಿ,ನಾವೂರು,ಉಳಿ, ಮಣಿನಾಲ್ಕೂರು,ಬಡಗಕಜೆಕಾರು, ಕಾವಳಪಡೂರು, ಕಾವಳಮೂಡೂರು ಗ್ರಾಮ ಪಂಚಾಯತಗಳ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟನೆಗೈದು ಅವರು ಮಾತನಾಡಿದರು.
ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಮಸ್ಯೆ ಹೇಳಿಕೊಂಡಾಗ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನು ಜನರ ಬಳಿಗೆ ಕರೆದುಕೊಂಡು ಬರಲಾಗಿದೆ ಎಂದರು.
ಬಂಟ್ವಾಳ ತಹಶೀಲ್ದಾರ್ ಡಾ.ಸ್ಮಿತಾರಾಮು ಮಾತನಾಡಿ,ಶಾಸಕ ರಾಜೇಶ್ ನಾಯ್ಕ್ ಅವರ ಕಲ್ಪನೆಯಂತೆ ಕರ್ನಾಟಕದಲ್ಲಿ ಮೊದಲಬಾರಿಗೆ ವಿನೂತನ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿದ್ದು, ಜನಸಾಮಾನ್ಯರ ಕುಂದುಕೊರತೆ ಅಲಿಸಿ ಪರಿಹರಿಸಿ ಕ್ರಮಕೈಗೊಳ್ಳಲಾಗುವುದು ಎಂದರು.