ಮಂಗಳೂರು, ನ 21 (DaijiworldNews/DB): ರಿಕ್ಷಾದಲ್ಲಿ ಕುಕರ್ ಬಾಂಬ್ ಸ್ಫೋಟಗೊಂಡು ಗಂಭೀರ ಗಾಯಗೊಂಡ ರಿಕ್ಷಾ ಚಾಲಕ ಗೋರಿಗುಡ್ಡೆ ನಿವಾಸಿ ಪುರುಷೋತ್ತಮ ಪೂಜಾರಿ ಅವರನ್ನು ವಿವಿಧ ದೇವಳ ಮತ್ತು ಸಂಘಟನೆಗಳ ಮುಖಂಡರು ಭೇಟಿಯಾಗಿ ನೆರವಿನ ಭರವಸೆ ನೀಡಿದರು.
ಕುದೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಬಿಲ್ಲವ ಬ್ರಿಗೇಡ್ ಸ್ಥಾಪಕಾಧ್ಯಕ್ಷ ಅವಿನಾಶ್ ಸುವರ್ಣ, ಕೃತಿನ್, ಗೆಜ್ಜೆಗಿರಿ ಕ್ಷೇತ್ರದ ವಕ್ತಾರ ರಾಜೇಂದ್ರ ಚಿಲಿಂಬಿ ಅವರು ಪುರುಷೋತ್ತಮ ಪೂಜಾರಿ ಅವರನ್ನು ಭೇಟಿಯಾಗಿ ಧೈರ್ಯ ತುಂಬಿದರು. ಅಲ್ಲದೆ ಎಲ್ಲ ರೀತಿಯ ಸಹಾಯ ನೀಡುವುದದಾಗಿ ಭರವಸೆ ನೀಡಿದರು. ಬಳಿಕ ಪುರುಷೋತ್ತಮ ಅವರ ಪತ್ನಿ, ಮಕ್ಕಳ ಜತೆ ಸಮಾಲೋಚನೆ ನಡೆಸಿ ಅವರಿಗೂ ಧೈರ್ಯ ತುಂಬಿದರು.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಪುರುಷೋತ್ತಮ ಅವರು 25 ವರ್ಷಗಳಿಂದ ರಿಕ್ಷಾದಲ್ಲಿ ದುಡಿದು ಕುಟುಂಬವನ್ನು ಮುನ್ನಡೆಸುತ್ತಿದರು. ಇದೀಗ ರಿಕ್ಷಾವನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದು ಭಯೋತ್ಪಾದಕ ಕೃತ್ಯವಾದ ಕಾರಣ ಸದ್ಯ ಬಿಡುಗಡೆ ಭಾಗ್ಯವಿಲ್ಲ. ಮಗಳಿಗೆ ಮದುವೆ ಕೂಡ ನಿಶ್ಚಯಗೊಂಡಿದ್ದು, ಅವರ ಸಂಕಷ್ಟವನ್ನು ಅರಿತು ಅವರ ಕುಟುಂಬಕ್ಕೆ ಧೈರ್ಯ ತುಂಬಿ ನಿಮ್ಮ ಜೊತೆ ನಮ್ಮ ಸಮಾಜ ಕೂಡ ಇದೆ ಎಂದು ಧೈರ್ಯ ತುಂಬಲಾಯಿತು ಎಂದು ಅವರನ್ನು ಭೇಟಿಯಾದ ಮುಖಂಡರು ತಿಳಿಸಿದ್ದಾರೆ.