ಮಂಗಳೂರು, ನ 21 (DaijiworldNews/HR): ಮಂಗಳೂರಿನ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆ ಬಳಿ ಆಟೋದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡಿರುವ ಶಾರೀಕ್ನ ಕುಟುಂಬಸ್ಥರು ಮಂಗಳೂರಿನ ಆಸ್ಪತ್ರೆಗೆ ಆಗಮಿಸಿ ಆತನ ಗುರುತು ಪತ್ತೆ ಹಚ್ಚಿದ್ದಾರೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಡಿಜಿಪಿ, ಆಟೋದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡಿರುವ ಶಂಕಿತ ಶಾರೀಕ್ನ ಚಿಕ್ಕಮ್ಮ, ಸಹೋದರಿ ಶಿವಮೊಗ್ಗದಿಂದ ಮಂಗಳೂರಿನ ಆಸ್ಪತ್ರೆಗೆ ಆಗಮಿಸಿದ್ದು ಆತನ ಗುರುತು ಪತ್ತೆ ಹಚ್ಚಿದ್ದಾರೆ. ಈತ ಮಂಗಳೂರಿನ ಗೋಡೆ ಬರಹದ ಆರೋಪಿ ಕೂಡ ಆಗಿದ್ದು, ವಿಧ್ವಂಸಕ ಕೃತ್ಯ ಎಸೆಗಲು ಸಂಚು ರೂಪಿಸಿದ್ದು, ಆತ ಗುಣಮುಖನಾದ ಬಳಿನ ಕಸ್ಟಡಿಗೆ ತೆಗೆದುಕೊಂಡು ಹೆಚ್ಚಿನ ತನಿಖೆ ನಡೆಸಲಾಗುವುದು ಎಂದರು.
ಶಾರಿಕ್ ಮೈಸೂರಿನಲ್ಲಿ ಮೋಹನ್ ಕುಮಾರ್ ಎನ್ನುವವರ ಮನೆಯಲ್ಲಿ ವಾಸವಿದ್ದು, ಆತನ ಮೈಸೂರಿನ ಬಾಡಿಗೆ ಮನೆಯಲ್ಲಿ ಹಲವು ಸ್ಫೋಟಕ ವಸ್ತು ಪತ್ತೆಯಾಗಿದ್ದು, ಮತ್ತೊಂದು ಫೇಕ್ ಐಡಿ ಪಡೆದು ಕೊಯಮುತ್ತೂರಿನಲ್ಲಿ ಕೂಡ ಈತ ಇದ್ದ ಎನ್ನಲಾಗಿದೆ.
ಇನ್ನು ಈತ ಸೆ.8ರಂದು ಒಂದು ಬಾರಿ ಮಂಗಳೂರಿಗೆ ಬಂದಿದ್ದು, ಜನನಿಬಿಡ ಪ್ರದೇಶ ಸೇರಿದಂತೆ ಹಲವು ಪ್ರದೇಶ ವೀಕ್ಷಿಸಿ ತೆರಳಿದ್ದ ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ ಎಂದರು.
ಈ ಘಟನೆಗೆ ಸಂಬಂಧಿಸಿದಂತೆ ಮೈಸೂರಿನಿಂದ ಇಬ್ಬರು ಹಾಗೂ ಮಂಗಳೂರಿನ ಒಬ್ಬರನ್ನ , ಊಟಿಯಿಂದ ಒಬ್ಬರನ್ನು ವಶಕ್ಜೆ ಪಡೆದಿದ್ದು, ಶಾರೀಕ್ ವಿದೇಶದ ಒಂದು ಟೆರರ್ ಸಂಘಟನೆಯ ಪ್ರಭಾವಕ್ಕೆ ಒಳಗಾಗಿದ್ದು,ತೀರ್ಥಹಳ್ಳಿಯ ಅಬ್ದುಲ್ ಮತೀನ್ ತಾಹಾ ಇದರ ಮೈನ್ ಹ್ಯಾಂಡ್ಲರ್ ಆಗಿದ್ದು, ಅವನು ತಲೆಮರೆಸಿಕೊಂಡಿದ್ದು, ಎನ್.ಐ.ಎ ಎರಡು ಲಕ್ಷ ರಿವಾರ್ಡ್ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.