ಮಂಗಳೂರು, ನ. 20 (DaijiworldNews/SM): ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು ಕಡಿಮೆ ಇರಬಹುದು. ಆದರೆ ಗುಣಮಟ್ಟ ಇಂದಿಗೂ ಚೆನ್ನಾಗಿಯೇ ಇದೆ. ಕನ್ನಡ ಶಾಲೆಗಳ ಕುರಿತಾದ ಕೀಳರಿಮೆ ಮತ್ತು ಆಂಗ್ಲ ಭಾಷೆಯೆಂದರೆ ಪ್ರತಿಷ್ಠೆಯೆಂಬ ಭ್ರಮೆಯಿಂದ ಜನತೆ ಹೊರಬರಬೇಕು. ಏಕೆಂದರೆ ಕನ್ನಡ ನಾಡಿನ ಬಹುತೇಕ ಸಾಧಕರಲ್ಲಿ ಕ್ರಿಯಾಶೀಲತೆಯನ್ನು ಬೆಳೆಸಿದ್ದೇ ಕನ್ನಡ ಮಾಧ್ಯಮ ಶಾಲೆಗಳು ಎಂದು ಕರ್ನಾಟಕದ ವಿಧಾನಸಭೆಯ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಕೇಶವ ಸ್ಮೃತಿ ಸಂವರ್ಧನ ಸಮಿತಿ (ನೋಂ.) ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಿದ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಭಾನುವಾರ ಮಾತನಾಡಿದರು.
ಆಡು ಭಾಷೆ, ಮಾತೃಭಾಷೆ ಮತ್ತು ರಾಷ್ಟ್ರಭಾಷೆಗೆ ಸರಿಸಮವಾಗಿ ಗೌರವಕೊಡಬೇಕು. ಮಾತೃಭಾಷೆ ಕೇವಲ ಪಠ್ಯದ ವಿಷಯವಾಗಿರದೆ ಸಂಸ್ಕಾರ ನೀಡುವ, ಸಂಸ್ಕೃತಿಯನ್ನು ಪರಿಚಯಿಸುವ ಶಕ್ತಿಯನ್ನು ಹೊಂದಿದೆ. ಭಾಷೆಯ ಅಭಿವೃದ್ಧಿಯ ದೃಷ್ಟಿಯಿಂದ ಇಂತಹ ಕನ್ನಡ ಶಾಲಾ ಮಕ್ಕಳ ಹಬ್ಬ ಎಂಬ ಚಟುವಟಿಕೆಯುಕ್ತ ಕಾರ್ಯಕ್ರಮ ಉದಾತ್ತ ಪರಿಕಲ್ಪನೆಗಳನ್ನೊಳಗೊಂಡ ಪರಿವರ್ತನಾಶೀಲ ಮಾದರಿಯನ್ನು ನಾಡಿನ ಎದುರಿಗಿರಿಸಿದೆ ಎಂದು ನುಡಿದರು.