ಮಂಗಳೂರು,ಫೆ 24 (MSP): ಕುಡ್ಲದ ಕುವರಿ, ಬಾಲಿವುಡ್ ನಟಿ ಐಶ್ವರ್ಯ ರೈ ಅವರು ತಮ್ಮ ಪತಿ ಅಭಿಷೇಕ್ ಬಚ್ಚನ್ ಅವರೊಂದಿಗೆ ಮಂಗಳೂರಿಗೆ ಬಂದಿಳಿದಿದ್ದಾರೆ. ಐಶ್ವರ್ಯ ರೈ ಅವರ ಚಿಕ್ಕಪ್ಪ ಇತ್ತೀಚೆಗೆ ನಿಧನರಾಗಿದ್ದು, ಅವರ ಶ್ರಾದ್ದದಲ್ಲಿ ಪಾಲ್ಗೊಳ್ಳಲು ಬಚ್ಚನ್ ದಂಪತಿಗಳು ಮಂಗಳೂರಿಗೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಮಂಗಳೂರಿನಲ್ಲಿ ನಡೆಯುವ ಶ್ರಾದ್ದದಲ್ಲಿ ಭಾಗವಹಿಸಲು ಪತಿ ಬಾಲಿವುಡ್ ಸ್ಟಾರ್ ಅಭಿಷೇಕ್ ಬಚ್ಚನ್ ಅವರೊಂದಿಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಇವರಿಗಾಗಿ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಕುಟುಂಬಸ್ಥರು, ಬಳಿಕ ಕಾರಿನಲ್ಲಿ ನೇರವಾಗಿ ಶ್ರಾದ್ದ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಮಗಳು ಆರಾಧ್ಯ ಅವರೊಂದಿಗೆ ಕಾಣಿಸಿಕೊಂಡಿಲ್ಲ.
ಬಾಲಿವುಡ್ ನಟಿ ಐಶ್ವರ್ಯ ರೈ ಮುಂಬಯಿನಲ್ಲಿ ನೆಲೆಸಿದ್ದರೂ ಕೂಡಾ, ತವರೂರಿನೊಂದಿಗೆ ತಮ್ಮ ಸಂಬಂಧ ಮುಂದುವರಿಸಿಕೊಂಡಿರುವ ಬಂದಿರುವ ಐಶ್ವರ್ಯ, ಕುಡ್ಲದಲ್ಲಿ ನಡೆಯುವ ತಮ್ಮ ಸಂಬಂಧಿಕರ ಕಾರ್ಯಕ್ರಮದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಹಿಂದೆ ಐಶ್ವರ್ಯ ತಂದೆ ಕೃಷ್ಣರಾಜ್ ಅವರು ನಿಧನರಾದಗಲೂ ಅವರ ಪಿಂಡ ಪ್ರದಾನ ಮಾಡುವುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನಕ್ಕೆ ತಾಯಿ ಬೃಂದಾ ರೈ ಮತ್ತು ಮಗಳು ಆರಾಧ್ಯ ಬಚ್ಚನ್ ರೊಂದಿಗೆ ಆಗಮಿಸಿದ್ದನ್ನು ನೆನಪಿಸಿಕೊಳ್ಳಬಹುದು.