ಕಾಸರಗೋಡು,ಫೆ 24 (MSP): ಯುವ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆಯ ಬಳಿಕ ಪೆರಿಯ ಪರಿಸರದಲ್ಲಿ ರಾಜಕೀಯ ಹಿಂಸಾಚಾರ ಮರುಕಳಿಸುತ್ತಿದ್ದು, ಕಾಂಗ್ರೆಸ್ ಉದುಮ ಬ್ಲಾಕ್ ಸಮಿತಿ ಅಧ್ಯಕ್ಷರ ಮನೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಬ್ಲಾಕ್ ಸಮಿತಿ ಅಧ್ಯಕ್ಷ ರಾಜನ್ ಪೆರಿಯ ರವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಕಳೆದ ಒಂದು ವಾರದಿಂದ ಸಿಪಿಎಂ - ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹಿಂಸಾಚಾರ ನಡೆಯುತ್ತಲೇ ಇದ್ದು, ಈ ನಡುವೆ ಕಾಂಗ್ರೆಸ್ ಮುಖಂಡನ ಮನೆಗೆ ಬೆಂಕಿ ಹಚ್ಚಲಾಗಿದ್ದು , ಪರಿಸ್ಥಿತಿ ಉದ್ವಿಗ್ನಗೊಳ್ಳುವಂತೆ ಮಾಡಿದೆ.
ಮನೆಯಂಗಳದಲ್ಲಿದ್ದ ಕಾರನ್ನು ಹಾನಿಗೊಳಿಸಿದೆ. ಕಿಟಿಕಿ ಗಾಜುಗಳನ್ನು ಹುಡಿಗೈದಿರುವ ತಂಡವು ಮನೆಗೆ ಬೆಂಕಿ ಹಚ್ಚಿದ್ದು ವರಾಂಡದಲ್ಲಿದ್ದ ಪೀಠೋಪಕರಣ ಹಾಗೂ ಇನ್ನಿತರ ವಸ್ತುಗಳು ಸುಟ್ಟು ಕರಕಲಾಗಿವೆ. ರಾಜನ್ ಮತ್ತು ಕುಟುಂಬದವರು ಮನೆಯಲ್ಲಿದ್ದಾಗಲೇ ಈ ಘಟನೆ ನಡೆದಿದೆ.
ಯುವ ಕಾಂಗ್ರೆಸ್ ಕಾರ್ಯಕರ್ತರ ಕೊಲೆ ಬಳಿಕ ನಡೆದ ಹರತಾಳದ ಸಂದರ್ಭದಲ್ಲಿ ಪರಿಸರದ ಹಲವು ಸಿಪಿಎಂ ಕಾರ್ಯಕರ್ತರ ಮಳಿಗೆಗಳು, ಮನೆಗಳು ಮತ್ತು ಕಚೇರಿಗಳನ್ನು ಹಾನಿಗೊಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ಸಂಸದ ಪಿ.ಕರುಣಾಕರಣ್ ನೇತೃತ್ವದ ನಿಯೋಗ ಶನಿವಾರ ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಡೆದಿದ್ದು , ಈ ಸಂದರ್ಭದಲ್ಲಿ ಘರ್ಷಣೆ ನಡೆದಿತ್ತು . ಈ ಬೆಳವಣಿಗೆ ಬಳಿಕ ಇಂದು ಮುಂಜಾನೆ ಕಾಂಗ್ರೆಸ್ ಮುಖಂಡನ ಮನೆಗೆ ಬೆಂಕಿ ಹಚ್ಚಲಾಗಿದೆ.
ಕಳೆದ ಭಾನುವಾರ ರಾತ್ರಿ ಪೆರಿಯದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ರನ್ನು ಕೊಲೆಗೈಯ್ಯಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಪಿಎಂ ಸ್ಥಳೀಯ ಮುಖಂಡ ಸೇರಿದಂತೆ ಏಳು ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ.