ಉಡುಪಿ,ಫೆ 24 (MSP): ’ಗೋ ಬ್ಯಾಕ್ ಶೋಭಾ ಅಭಿಯಾನ ’ ವಿಚಾರವಾಗಿ ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಯಾರ ಹೆಸರನ್ನು ಉಚ್ಚರಿಸದೆ ಪರೋಕ್ಷವಾಗಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರಿಗೆ ಶೋಭಾ ಟಾಂಗ್ ನೀಡಿದರು.
ಉಡುಪಿ ಜಿಲ್ಲೆಗೆ ಪಾಸ್ ಪೋರ್ಟ್ ಕಚೇರಿ ಬಂದಿದೆ, ರಾಜ್ಯದ ಏಕೈಕ ಸಖಿ ಸೆಂಟರ್ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿದೆ, ಎರಡು ಜಿಲ್ಲೆಗೂ ಕೇಂದ್ರೀಯ ವಿದ್ಯಾಲಯ ತಂದಿದ್ದೇವೆ, ಇದಲ್ಲದೆ ಜಿಟಿಡಿಸಿ ಕಟ್ಟಡ, ಕೌಶಲ್ಯ ತರಬೇತಿ ಕೇಂದ್ರ ನಿರ್ಮಾಣವಾಗಿದೆ. ಜತೆಗೆ 550 ಕೋಟಿ ರುಪಾಯಿ ಸಿಆರ್ ಎಫ್ ಫಂಡ್ ತಂದಿದ್ದೇನೆ. ಎರಡು ಜಿಲ್ಲೆಗಳಲ್ಲಿಯೂ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದೆ. ಈ ಕ್ಷೇತ್ರದಲ್ಲಿ ’ಗಂಡಸು ’ ಸಂಸದರಾಗಿದ್ದವರಿಗೆ ನಾನು ಚಾಲೆಂಜ್ ಮಾಡುತ್ತೇನೆ. ನನಗೆ ಹಣಬಲ, ಜಾತಿ ಬಲ, ಬಾಹುಬಲ ಇಲ್ಲದೆ ಇರಬಹುದು, ಅಥವಾ ಬೆಂಬಲ ಕೊಡದವರಿಲ್ಲದಿರಬಹುದು. ಆದರೆ ಇಷ್ಟು ವರ್ಷ ಕ್ಷೇತ್ರದಲ್ಲಿ ಗಂಡಸು ಸಂಸದರೆಣಿಸಿಕೊಂಡವರು ಏನು ಮಾಡಿದ್ದೀರಿ ? ಮಹಿಳೆಯಾಗಿ ನಾನು ಇಷ್ಟೆಲ್ಲಾ ಮಾಡಿದ್ದೇನೆ . ನಿಮ್ಮ ಕೈಯಲ್ಲಿ ಆಗದ ಕೆಲಸ ನಾನು ಮಾಡಿದ್ದೇನೆ. ನಾನು ಇದೆಲ್ಲವೂ ಟಿಕೆಟ್ ನ ಆಸೆಗಾಗಿ ಮಾಡಿದ್ದಲ್ಲ. ಕ್ಷೇತ್ರದ ಅಭಿವೃದ್ದಿಗಾಗಿ ಮಾಡಿರುವಂತದ್ದು ಎಂದು ಅಕ್ರೋಶ ವ್ಯಕ್ತಪಡಿಸಿದರು.
ಟಿಕೆಟ್ ಆಸೆಗಾಗಿ ನನ್ನ ವಿರುದ್ದ ವ್ಯವಸ್ಥಿತ ಅಪಪ್ರಚಾರ ನಡೆಯುತ್ತಿದೆ. ಆದರೆ ಇದಕ್ಕೆಲ್ಲಾ ನಾನು ಹೆದರುವವಳಲ್ಲ. ನನ್ನ ವಿರುದ್ದ ಕೆಲವರು 10-20 ಹುಡುಗರ ಗುಂಪು ಕಟ್ಟಿಕೊಂಡು ಅಪಪ್ರಚಾರ ನಡೆಸುತ್ತಿದ್ದಾರೆ. ಈಗ ಬಿಜೆಪಿಗೆ ದ್ವನಿ ಎತ್ತಿದವರ ಕೊಡುಗೆಯೇನು ? ನಾನು 25 ವರ್ಷದಿಂದ ಪಕ್ಷಕ್ಕೆ ಮಣ್ಣು ಹೊತ್ತಿದ್ದೇನೆ ರಾಜ್ಯದಲ್ಲೆಲ್ಲಾ ಓಡಾಡಿ ಪಕ್ಷ ಸಂಘಟಿಸಿದ್ದೇನೆ. ಈ ರೀತಿ ಬೆನ್ನ ಹಿಂದೆ ಅಪಪ್ರಚಾರ ನಡೆಸುವುದಕ್ಕಿಂತ ನನ್ನ ಜೊತೆ ನೇರವಾಗಿ ಚರ್ಚೆಗೆ ಬನ್ನಿ ಆಮೇಲೆ ಟಿಕೆಟ್ ಕೇಳಿ ಎಂದು ಪರೋಕ್ಷವಾಗಿ ಜಯಪ್ರಕಾಶ್ ಹೆಗ್ಡೆ ವಿರುದ್ದ ಕಿಡಿಕಾರಿದರು.
ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಈ ಬಾರಿ ಸಂಸದೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡದಂತೆ ಒತ್ತಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಸ್ವಪಕ್ಷೀಯರೇ ’ಗೋ ಬ್ಯಾಕ್ ಶೋಭಾ’ ಅಭಿಯಾನ ಆರಂಭಿಸಿದ್ದರು.