ಕಡಬ, ನ 19 (DaijiworldNews/DB): ಅಪ್ರಾಪ್ತ ಬಾಲಕನಿಗೆ ವಾಹನ ಚಲಾಯಿಸಲು ನೀಡಿದ ವಾಹನ ಮಾಲಕನಿಗೆ ಪುತ್ತೂರು ಎ.ಸಿ.ಜೆ. ಜೆ.ಎಮ್.ಎಫ್.ಸಿ ನ್ಯಾಯಾಲಯ 20 ಸಾವಿರ ದಂಡ ವಿಧಿಸಿದೆ.
ಕೊಯಿಲ ಗ್ರಾಮದ ಕೆ.ಸಿ.ಫಾರ್ಮ್ ನಿವಾಸಿ ಅಬ್ದುಲ್ ರಹಿಮಾನ್ ದಂಡ ಪಾವತಿಸಿದವರು. 2020ರಲ್ಲಿ ಅಬ್ದುಲ್ ರಹಿಮಾನ್ ಅವರು ತಮ್ಮ ಅಪ್ರಾಪ್ತ ಪುತ್ರನಿಗೆ ಬೈಕ್ ಚಲಾಯಿಸಲು ನೀಡಿದ್ದರು. ಈ ಬೈಕ್ ಅಪಘಾತವಾದ ಹಿನ್ನೆಲೆಯಲ್ಲಿ ಬಾಲಕನ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರು ಎ.ಸಿ.ಜೆ. ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಯೋಗೀಂದ್ರ ಶೆಟ್ಟಿ ಅವರು, ಅಪ್ರಾಪ್ತನಿಗೆ ಬೈಕ್ ನೀಡಿದ್ದಕ್ಕಾಗಿ ಬಾಲಕನ ತಂದೆ, ಬೈಕ್ ಮಾಲಕ ಅಬ್ದುಲ್ ರಹಿಮಾನ್ ಅವರಿಗೆ 20 ಸಾವಿರ ದಂಡ ಪಾವತಿಸುವಂತೆ ಆದೇಶಿಸಿದ್ದಾರೆ. ಸರಕಾರದ ಪರವಾಗಿ ಎ.ಪಿ.ಪಿ. ಕವಿತಾ ಅವರು ವಾದಿಸಿದ್ದರು.