ಕಾರ್ಕಳ, ನ 18 (DaijiworldNews/DB): ಮುಂಬರುವ ವಿಧಾನಸಭಾ ಚುನಾವಣೆಗೆ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಸ್ವರ್ಧಿಸಲು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಇಂಗಿತ ವ್ಯಕ್ತಪಡಿಸಿದ್ದಾರೆ.
ಮೂರು ದಿನಗಳ ಕಾಲ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡಿರುವ ಅವರು ಶುಕ್ರವಾರ ಕಾರ್ಕಳ ನಗರದಕ್ಕೆ ಅಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ತನ್ನ ಜೀವನದಲ್ಲಿ ಹಿಂದುತ್ವಕ್ಕಾಗಿ ಯಾರೊಂದಿಗೆ ರಾಜಿ ಮಾಡಿಕೊಂಡಿಲ್ಲ. ಸರಳತೆ, ಸ್ವಚ್ಚಂದತೆ, ಪ್ರಾಮಾಣಿಕತೆ, ತತ್ವ-ಸಿದ್ಧಾಂತದ ಜೊತೆಗೆ ರಾಷ್ಟ್ರಪ್ರೇಮವನ್ನು ಮೆರೆದಿದ್ದೇನೆ. ಧನ, ಕನಕ, ಆಸ್ತಿ, ಅಂತಸ್ತುಗಳ ಮೋಹದ ಜಾಲಕ್ಕೆ ಬೀಳುತ್ತಿದ್ದರೆ ಎಂದೋ ನಾನು ಧನಿಕನಾಗಿ ರಾಜಕೀಯದಲ್ಲಿ ಪ್ರಮುಖ ಹುದ್ದೆಯನ್ನು ಅಲಂಕರಿಸುತ್ತಿದ್ದೆ. ರಾಜಕೀಯದಲ್ಲಿ ಹಿಂದುತ್ವದ ಮಹತ್ವ ಅನುಷ್ಠಾನವಾಗಬೇಕೆಂಬ ಇಚ್ಛೆಯೊಂದಿಗೆ ನಾನು ಮುಂದಿನ ಚುನಾವಣೆ ರಂಗಕ್ಕೆ ಸ್ವರ್ಧಿಸುತ್ತಿದ್ದೇನೆ. ಇದು ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯ ಮೂಲ ಉದ್ದೇಶವೂ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರು ನನಗೆ ಪ್ರೇರಣೆ ಶಕ್ತಿಯಾಗಿದ್ದಾರೆ ಎಂದರು.
ಹಿಂದುತ್ವವನ್ನೇ ಹಿಡಿದುಕೊಂಡು ರಾಜಕೀಯಕ್ಕೆ ಪ್ರವೇಶಿಸಿ ಜನಪ್ರತಿನಿಧಿಗಳಾಗುವವರು ನಂತರದ ದಿನಗಳಲ್ಲಿ ತಾವು ಮೇಲೇರಿ ಬಂದ ತತ್ವ-ಸಿದ್ಧಾಂತಗಳನ್ನು ಮರೆತು ಬಿಡುತ್ತಾರೆ. ಇದರಿಂದಲೇ ಭವಿಷ್ಯದ ಭಾರತದ ಚಿಂತನೆಗೂ ಮಾರಕವಾಗಿದೆ ಎಂದವರು ಇದೇ ವೇಳೆ ತಿಳಿಸಿದರು.
22 ವರ್ಷಗಳ ಹಿಂದೆ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿರುವ ಹಿಂದು ಶ್ರದ್ಧಾ ಕೇಂದ್ರ ದತ್ತಪೀಠ ವಿವಾದವು ಜೋರಾಗಿ ಸದ್ದು ಮಾಡಿ ನ್ಯಾಯಾಲಯದ ಮೆಟ್ಟಲೇರಿತು. ಆ ಮೂಲಕ ಇಂದಿರಾಗಾಂಧಿ ಪ್ರತಿನಿಧಿಸಿದ ಕ್ಷೇತ್ರ ಚಿಕ್ಕಮಗಳೂರು ಕಾಂಗ್ರೆಸ್ನ ಭದ್ರಕೋಟೆಯನ್ನು ಭೇದಿಸಿ ಕರಾವಳಿಯ ರಾಜಕೀಯ ರಂಗದಲ್ಲಿ ಹೊಸ ಬದಲಾವಣಿಗೆ ತರುವಲ್ಲಿ ಕಾರಣವಾಯಿತು. ಆ ಮೂಲಕ ಬಿಜೆಪಿಯು ಪ್ರಾಬಲ್ಯವಾಗಿ ಮೆರೆಯುವಂತೆ ಮಾಡಿತು. ನ್ಯಾಯಾಲಯವು ಹಿಂದುಗಳ ಪರವಾಗಿ ತೀರ್ಪು ನೀಡಿದ್ದರೂ, ದತ್ತಪೀಠದಲ್ಲಿ ಖಾಯಂ ಅರ್ಚಕರನ್ನು ನೇಮಿಸಲು ಇನ್ನೂ ಸಾಧ್ಯವಾಗದೇ ಇರುವುದಕ್ಕೆ ಸರ್ಕಾರದ ಲೋಪ ಕಾರಣವಾಗಿದೆ. ವಿಧಾನಸಭೆಯಲ್ಲಿ ಹಿಂದು ಪರವಾಗಿ ಧ್ವನಿ ಎತ್ತುವ ಜನಪ್ರತಿನಿಧಿಗಳು ಇದ್ದಾಗ ಮಾತ್ರ ಈ ಎಲ್ಲಾ ಸಮಸ್ಸೆ ಪರಿಹಾರ ಸಿಗಲಿದೆ ಎಂದರು.
ಗೋಹತ್ಯೆ ನಿಷೇಧ ಜಾರಿಯಲ್ಲಿದ್ದರೂ, ಪ್ರಸಕ್ತ ದಿನಗಳಲ್ಲಿಯೂ ಎಗ್ಗಿಲ್ಲದೇ ಗೋವುಗಳನ್ನು ಹಟ್ಟಿಗೆ ನುಗ್ಗಿ ಎಗರಿಸುವತ್ತಿರುವ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿದೆ. ಬೆರಳೆಣಿಕೆಯಲ್ಲಿ ಮಾತ್ರ ಪ್ರಕರಣಗಳನ್ನು ದಾಖಲಿಸುವ ಪೊಲೀಸರು ಕರ್ತವ್ಯ ಲೋಪ ವೆಸಗುತ್ತಿದ್ದಾರೆ. ಕಳವಾದ ಗೋವುಗಳನ್ನು ಪತ್ತೆ ಹಚ್ಚಿ ತಾವೇ ತಂದೊಪ್ಪಿಸುತ್ತೇವೆ ಎಂಬ ಭರವಸೆ ನೀಡುವ ಮೂಲಕ ಪ್ರಕರಣಗಳು ನಡೆಯಲಿಲ್ಲ ಎಂದು ದಾಖಲೆ ಸೃಷ್ಠಿಸುತ್ತಿದ್ದಾರೆ. ಗೋಹಂತಕರಿಗೆ ಸರ್ಕಾರವೇ ಬೆಂಬಲಿಸುತ್ತಿದೆ. ಇದಕ್ಕೆ ಇಂಬು ನೀಡುತ್ತಿರುವಂತೆ ಗೋಕಳ್ಳರಿಗೆ ಬಿಜೆಪಿ ವಕೀಲರೇ ಶ್ರೀರಕ್ಷೆಯಾಗಿದ್ದಾರೆ. ವೃತ್ತಿ ಧರ್ಮಕ್ಕೂ- ಹಿಂದು ಧರ್ಮಕ್ಕೂ ಯಾವುದೇ ಸಂಬಂಧಗಳಿಲ್ಲ ಎಂದು ಹೇಳುತ್ತಿರುವುದರಿಂದ ದೇಶದಲ್ಲಿ ಭಯೋತ್ಸಾದನೆಗೆ ಕುಮ್ಮುಕ್ಕು ನೀಡುವಂತಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.