ಮಂಗಳೂರು,ಫೆ,24 (MSP): ಸರಣಿ ಹಂತಕ ಸೈನೈಡ್ ಮೋಹನ್ಕುಮಾರ್ಗೆ 7 ನೇ ಪ್ರಕರಣದಲ್ಲೂ ಇಲ್ಲಿನ 6 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವನ ಪರ್ಯಂತ ಜೀವಾವಧಿ ಶಿಕ್ಷೆ ವಿಧಿಸಿದೆ.
ಅಪಹರಣ ಪ್ರಕರಣದಡಿ ಆರು ವರ್ಷ ಕಠಿಣ ಶಿಕ್ಷೆ, 3 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ ಮತ್ತೂ ಒಂದು ತಿಂಗಳು ಶಿಕ್ಷೆ, ಕೊಲೆ ಆರೋಪದಡಿ ಜೀವನ ಪರ್ಯಂತ ಜೀವಾವಧಿ ಶಿಕ್ಷೆ, ಅತ್ಯಾಚಾರ ಪ್ರಕರಣದಲ್ಲಿ ಏಳು ವರ್ಷ ಕಠಿಣ ಶಿಕ್ಷೆ ಹಾಗೂ 3 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ ಒಂದು ತಿಂಗಳ ಜೈಲು, ವಿಷ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಏಳು ವರ್ಷ ಕಠಿಣ ಜೈಲು ಹಾಗೂ 3 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ ಒಂದು ತಿಂಗಳ ಸಜೆ, ಸಾಕ್ಷಿ ನಾಶ ಆರೋಪದಡಿ ಐದು ವರ್ಷ ಕಠಿಣ ಸಜೆ ಹಾಗೂ 3 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ ಒಂದು ತಿಂಗಳ ಜೈಲು, ಚಿನ್ನಾಭರಣ ಸುಲಿಗೆ ಪ್ರಕರಣದಲ್ಲಿ 5 ವರ್ಷ ಕಠಿಣ ಶಿಕ್ಷೆ ಹಾಗೂ 3 ಸಾವಿರ ದಂಡ ವಿಧಿಸಲಾಗಿದ್ದು, ವಂಚನೆ ಪ್ರಕರಣದಲ್ಲಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಪ್ರಕರಣದ ವಿವರ: ಬಂಟ್ವಾಳ ತಾಲೂಕಿನನ ಮಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 25 ವರ್ಷದ ಯುವತಿಯನ್ನು ಸೈನೈಡ್ ಮೋಹನ್ ವೆನ್ಲಾಕ್ ಆಸ್ಪತ್ರೆಯಲ್ಲಿ ಪರಿಚಯಿಸಿಕೊಂಡಿದ್ದ . ಆದರೆ ತನ್ನನ್ನು ಸದಾನಂದ ನಾಯ್ಕ ಎಂದು ಹೇಳಿಕೊಂಡಿದ್ದ.
‘ನಾನು ನಿಮ್ಮ ಜಾತಿಯವನೇ. ನಿನ್ನನ್ನು ಮದುವೆಯಾಗುತ್ತೇನೆ’ ಎಂದು ನಂಬಿಸಿದ್ದ ಮೋಹನ್ಕುಮಾರ್, 2008 ರ ಜನವರಿ 2 ರಂದು ಪುತ್ತೂರು ಬಸ್ ನಿಲ್ದಾಣಕ್ಕೆ ಚಿನ್ನಾಭರಣಗಳೊಂದಿಗೆ ಬರಲು ಹೇಳಿದ್ದ. ನಂತರ ಆಕೆಯನ್ನು ಮಡಿಕೇರಿಗೆ ಕರೆದೊಯ್ದಿದ್ದ ಆರೋಪಿ, ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ.
ಜನವರಿ 3 ರಂದು ಆಕೆಯನ್ನು ಮಡಿಕೇರಿಯ ಬಸ್ ನಿಲ್ದಾಣಕ್ಕೆ ಕರೆದೊಯ್ದು, ಸೈನೈಡ್ ನೀಡಿದ್ದ. ‘ಇದು ಗರ್ಭ ನಿರೋಧಕ ಮಾತ್ರೆ. ಶೌಚಾಲಯಕ್ಕೆ ಹೋಗಿ ಅದನ್ನು ಸೇವಿಸು’ಎಂದು ತಿಳಿಸಿದ್ದ. ಅಲ್ಲಿ ಮಾತ್ರೆ ಸೇವಿಸಿದ ಯುವತಿ ಅಲ್ಲೇ ಕುಸಿದು ಬಿದ್ದಿದ್ದಾಳೆ. ಶೌಚಾಲಯ ಸ್ವಚ್ಚ ಮಾಡಲು ಹೋದ ಕಾರ್ಮಿಕರು ಹಾಗೂ ಟ್ರಾಪಿಕಿ ಕಂಟ್ರೋಲರ್ ಯುವತಿಯನ್ನು ಆಸ್ಪತ್ರೆಗೆ ಕೊಂಡೊಯ್ದಾಗ ಯುವತಿ ಮೃತಪಟ್ಟಿದಳು. ಇದು ಅಸಹಜ ಸಾವು ಎಂದು ಎಂದು ಮಡಿಕೇರಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಅತ್ತ ಕಡೆ ಹಂತಕ ರೂಮ್ಗೆ ಮರಳಿ, ಚಿನ್ನಾಭರಣವಿದ್ದ ಬ್ಯಾಗ್ನೊಂದಿಗೆ ಅಲ್ಲಿಂದ ಪರಾರಿಯಾಗಿದ್ದ.
2009 ರಲ್ಲಿ ಬರಿವಾರು ಯುವತಿಯೊಬ್ಬಳ ಕೊಲೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಈ ಯುವತಿಯ ಕೊಲೆ ಪ್ರಕರಣ ಬಯಲಿಗೆ ಬಂದಿತ್ತು. ಪ್ರಕರಣದ ವಿಚಾರಣೆ ನಡೆಸಿದ ಇನ್ಸ್ಪೆಕ್ಟರ್ ನಂಜುಂಡೇಗೌಡ, ತನಿಖೆಯ ವರದಿಯನ್ನು ಸಿಒಡಿಗೆ ಹಸ್ತಾಂತರಿಸಿದ್ದರು. ಸಿಒಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ 6 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಡಿ.ಟಿ. ಪುಟ್ಟರಂಗಸ್ವಾಮಿ, 40 ಸಾಕ್ಷಿಗಳ ವಿಚಾರಣೆ ನಡೆಸಿದ್ದಾರೆ. ಅಲ್ಲದೇ 64 ದಾಖಲೆಗಳನ್ನು ಪರಿಶೀಲಿಸಿ, ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಜುಡಿತ್ ಎಂ. ಕ್ರಾಸ್ತಾ ವಾದ ಮಂಡಿಸಿದ್ದರು.