ಉಡುಪಿ, ಫೆ 23(SM): ಉಡುಪಿಯ ಅಂಬಾಗಿಲು, ಪೆರಂಪೆಳ್ಳಿ, ಮಣಿಪಾಲ ರಸ್ತೆಯ ಅಗಲೀಕರಣದ ಬಗ್ಗೆ ಭೂ-ಸ್ವಾಧೀನಗೊಳಿಸುವ ಬಗ್ಗೆ ಭೂ ಸಂತ್ರಸ್ತರ ಸಭೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರುಗಿತು. ಶಾಸಕ ಕೆ ರಘುಪತಿ ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ತಾಲೂಕಿನ ಅಂಬಾಗಿಲು, ಮಣಿಪಾಲ ರಸ್ತೆಗೆ 2 ನೇ ಹಂತದಲ್ಲಿ 10 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ರಸ್ತೆ ಮಧ್ಯೆ 2 ಬದಿ 11 ಮೀ ಅಗಲದ ಒಟ್ಟು 22 ಮೀ ಅಗಲದ ಚತುಷ್ಪಥ ರಸ್ತೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಭೂ ಮಾಲಕರಿಗೆ ಉಪ ನೊಂದಾಣಾಧಿಕಾರಿ ಕಚೇರಿಯಲ್ಲಿ ಹೊಸದಾಗಿ ಪ್ರಕಟಗೊಂಡ ದರ ಪಟ್ಟಿಯಂತೆ ಭೂ ಮೌಲ್ಯ ನೀಡುವುದಾಗಿ ಸಭೆಯಲ್ಲಿ ತಿಳಿಸಲಾಯಿತು. ಭೂ ಸ್ವಾಧೀನ ಪ್ರಕ್ರಿಯೆಯನ್ನು ಮುಂದಿನ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಉಡುಪಿ ತಾಲೂಕು ತಹಶೀಲ್ದಾರ್ ಪ್ರದೀಪ್ ಕುರುಡೆಕರ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಚಂದ್ರಶೇಖರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಜಗದೀಶ್ ಭಟ್, ಗ್ರಾಮ ಕರಣಿಕರು, ಸರ್ವೇಯರ್ ಹಾಗೂ ಆ ಭಾಗದ ನಿವೇಶನದ ಮಾಲಕರು ಉಪಸ್ಥಿತರಿದ್ದರು.