ಕುಂದಾಪುರ, ನ. 16 (DaijiworldNews/SM) : ರಾಜ್ಯ, ಕೇಂದ್ರ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಿಐಟಿಯು ಹೋರಾಟ ನೀಡುತ್ತಿದೆ. ತುಳಿತಕ್ಕೊಳಗಾದ ಕಾರ್ಮಿಕರ ಪರವಾಗಿ ಅವರ ಹಕ್ಕುಗಳಿಗೋಸ್ಕರ ಹೋರಾಟ ಮಾಡುತ್ತಿದೆ. ಕಾರ್ಮಿಕರ ಸೌಲಭ್ಯಗಳನ್ನು ಸರ್ಕಾರಗಳು ಕಸಿದುಕೊಳ್ಳುತ್ತಿದೆ. ಕಾರ್ಮಿಕರ ಸೌಲಭ್ಯ, ಸುರಕ್ಷತೆಗಳು ಇಲ್ಲವಾಗಿವೆ. ಧೀರೋದತ್ತ ಹೋರಾಟಕ್ಕೆ ಸಾಕ್ಷಿಗಳಾಗಿದ್ದ ಬೀಡಿ ಕಾರ್ಮಿಕರ ಹಸಿವು ನೀಗಿಸುತ್ತಿದ್ದ ಬೀಡಿ ಕೈಗಾರಿಕೆಗಳನ್ನು ಸರ್ಕಾರದ ನೀತಿಗಳಿಂದ ನಶಿಸುತ್ತಿವೆ. ಪೆಟ್ರೋಲಿಂ ಬೆಲೆ ಏರಿಕೆ ಸಹಿತ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಬೇಕಾಗಿದೆ ಎಂದು ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಹೇಳಿದರು.
ಅವರು ಕುಂದಾಪುರದ ನೆಹರು ಮೈದಾನದಲ್ಲಿ ನಡೆದ ಕಾರ್ಮಿಕರ ಐಕ್ಯತೆ-ಜನತೆಯ ಸೌಹಾರ್ದತೆಗಾಗಿ 15ನೇ ಸಿಐಟಿಯು ರಾಜ್ಯ ಸಮ್ಮೇಳನ ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಇವತ್ತು ದೇಶದ ಸ್ಥಿತಿ ಸುಧಾರಿಸಿಲ್ಲ. ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಕಾರ್ಮಿಕರು, ಜನಸಾಮಾನ್ಯರ ಮೇಲೆ ನಡೆಯುತ್ತಿರುವ ದಾಳಿ ದಬ್ಬಾಳಿಕೆಗಳನ್ನು ಖಂಡಿಸಬೇಕಾಗಿದೆ. ದೇಶದ ಸ್ವತ್ತುಗಳು ಇವತ್ತು ಖಾಸಗಿಯವರ ಪಾಲಾಗುತ್ತಿದೆ. ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಬಂಡವಾಳದಾರರಿಗೆ ಪರವಾದ ಹೊಸ ಆರ್ಥಿಕ ನೀತಿಗಳ ವಿರುದ್ಧ ಸಿಐಟಿಯುವ ಹೋರಾಟ ಎನ್ನೂ ಎತ್ತರಕ್ಕೆರಬೇಕಾಗಿದೆ. ಸರ್ಕಾರದ ನಿರ್ಧಾರಗಳ ವಿರುದ್ಧ ಜನ ಐಕ್ಯತೆಯಿಂದ ಉತ್ತರಿಸಬೇಕಾಗಿದೆ ಆ ನಿಟ್ಟಿನಲ್ಲಿ ಜನವರಿ 18ರಿಂದ 20ರ ತನಕ ನಡೆಯುವ ಅಖಿಲ ಭಾರತ ಸಿಐಟಿಯುವ ಸಮ್ಮೇಳನ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಿದೆ ಎಂದರು.
ಸಿಐಟಿಯುವ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ಬಡವರಿಗೆ ಮತ್ತೆ ಮತ್ತೆ ತೆರಿಗೆ ಹೆಚ್ಚಳ, ಆಹಾರ ಪದಾರ್ಥ, ಶಾಲಾ ಶುಲ್ಕದ ಮೇಲೂ ಜಿಎಸ್ಟಿ, ಬ್ಯಾಂಕ್ ತೆರಿಗೆ, ಸರ್ಕಾರದ ಹತ್ತಿರ ದುಡ್ಡಿಲ್ಲ, ದುಡ್ಡಿಲ್ಲದ ಕಾರ್ಮಿಕ ಜನ ಸರ್ಕಾರಕ್ಕೆ ದುಡ್ಡು ಕೊಡಬೇಕು ಇದು ಇವತ್ತಿನ ವ್ಯವಸ್ಥೆಯಾಗಿದೆ ಎಂದರು.
ಸಾರ್ವಜನಿಕ ಆಸ್ತಿ, ಸರ್ಕಾರಿ ಬ್ಯಾಂಕು, ವಿದ್ಯುತ್, ವಿಮಾನ ನಿಲ್ದಾಣ, ಸರ್ಕಾರಿ ಆಸ್ಪತ್ರೆಗಳು, ಶಾಲೆಗಳು ಖಾಸಗಿಯವರ ಪಾಲಾಗುತ್ತಿದೆ. ಬಡಜನರಿಂದ ತೆರಿಗೆ ಕಟ್ಟಿಸಿಕೊಂಡ ಶ್ರೀಮಂತ ಸಾಲ ಮನ್ನಾ ಮಾಡಲಾಗುತ್ತಿದೆ. ಜಾಗತಿಕ ಮಟ್ಟಕ್ಕೆ ಉತ್ಪಾದನಾ ಘಟಕ ಆರಂಭವಾಗಬೇಕು ಎಂಬ ಹಿನ್ನೆಲೆಯಲ್ಲಿ ಕಾರ್ಮಿಕ ವಿನಾಯಿತಿ ಕಾನೂನುಗಳನ್ನು ತರಲು ಸರ್ಕಾರ ಮುಂದಾಗಿದೆ. ದೇಶ್ ಎನ್ನುವ ಕಾನೂನು ಜ್ಯಾರಿಯಾದರೆ ಕಾರ್ಖಾನೆಗಳಲ್ಲಿ ಕಾರ್ಮಿಕ ಕಾನೂನು ಚಲಾವಣೆಯಲ್ಲಿ ಇರುವುದಿಲ್ಲ. ಕಾರ್ಮಿಕರ ಭವಿಷ್ಯ, ಕಾರ್ಮಿಕ ನಂಬಿಕೊಂಡ ಕುಟುಂಬ ಅತಂತ್ರವಾಗುತ್ತದೆ ಎಂದರು.
ಶ್ರೀಮಂತರ ಮೇಲೆ ತೆರಿಗೆ ಹಾಕಿ, ಕಾರ್ಮಿಕರಿಗೆ ಕನಿಷ್ಠ ವೇತನ 36 ಸಾವಿರ ಜ್ಯಾರಿ ಮಾಡಿ, ಈಗ ಇರುವ ಉದ್ಯೋಗ ಉಳಿಸಿ, ಖಾಸಗೀಕರಣ ನಿಲ್ಲಿಸಿ ಎಂದರು.
ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್.ವರಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಮುಖಂಡರಾದ ಕೆ.ಎನ್.ಉಮೇಶ್, ಹಿರಿಯ ಕಾರ್ಮಿಕ ಮುಖಂಡರಾದ ವಿ.ಜೆ.ಕೆ ನಾಯರ್, ಸಿಐಟಿಯು 15ನೇ ಸ್ವಾಗತ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಕೆ.ಶಂಕರ್, ಕೋಶಾಧಿಕಾರಿ ಎಚ್.ನರಸಿಂಹ, ವೆಂಕಟೇಶ್ ಕೋಣಿ ಹಾಗು ಕಾರ್ಮಿಕರ ಮುಖಂಡರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ ಕಾರ್ಯಕ್ರಮ ನಿರ್ವಹಿಸಿದರು.
ಬಹಿರಂಗ ಸಭೆಗೂ ಮೊದಲು ಬೃಹತ್ ಜಾಥಾ ನಡೆಯಿತು. ಕೆಂಬಾವುಟ ಹಿಡಿದ ಸಾವಿರಾರು ಮಂದಿ ಕುಂದಾಪುರ ನಗರದಲ್ಲಿ ಸಾಗಿ ಬಂದರು.