ಕಾರ್ಕಳ, ನ 17 (DaijiworldNews/DB): ಬಿಜೆಪಿ ರಾಜ್ಯ ಮತ್ತು ದೇಶದಲ್ಲಿ ಅಧಿಕಾರದಲ್ಲಿದ್ದರೂ ಗೋ ಕಳವು ಹಾಗೂ ಗೋ ಹತ್ಯೆ ಎಗ್ಗಿಲ್ಲದೇ ನಡೆಯುತ್ತಿದೆ. ಪೊಲೀಸ್ ಇಲಾಖೆ ಇದರ ವಿರುದ್ದ ಕಠಿಣ ಕ್ರಮ ಕೈಗೊಳ್ಳದೇ ಹೋದಲ್ಲಿ ಹೋರಾಟದ ಮೂಲಕ ಪ್ರತ್ಯುತ್ತರ ನೀಡುವ ದಿನಗಳು ಎದುಗಲಿದೆ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ವಿವಿಧೆಡೆಗಳಿಗೆ ಗುರುವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಬಿಜೆಪಿ ಸರಕಾರವು ಕಟುಕರಿಗೆ ಪರೋಕ್ಷವಾಗಿ ಬೆಂಬಲಿಸುತ್ತಿರುವುದರಿಂದ ಕೃತ್ಯಗಳು ನಿರಂತರವಾಗಿ ಮುಂದುವರಿಯಲು ಕಾರಣವಾಗಿದೆ ಎಂದರು.
ಅಂಡಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನಕ್ಕೆ, ಹೆಬ್ರಿ, ಮುದ್ರಾಡಿಯ ಮೊದಲೆಡೆ ಧಾರ್ಮಿಕ ಕ್ಷೇತ್ರಗಳಿಗೆ ಹಾಗೂ ಸ್ಥಳೀಯ ಜನರ ಸಮಸ್ಸೆಗಳನ್ನು ಆಲಿಸಿದರು. ವಕೀಲ ಹರೀಶ್ ಅಧಿಕಾರಿ, ಪ್ರವೀಣ್ ಪೂಜಾರಿ ಎರ್ಲಪ್ಪಾಡಿ ಮೊದಲಾದವರು ಜೊತೆಯಲ್ಲಿದ್ದರು.
ಗೋ ಸಂತಸ್ತೆ ಕುಟುಂಬಕ್ಕೆ ನೆರವು
ಕುಟುಂಬಕ್ಕೆ ಆಧಾರವಾಗಿದ್ದ ಗೋವುಗಳು ಕಳವಾಗಿ ದುಃಖದಲ್ಲಿದ್ದ ಶಿರ್ಲಾಲು ಪಡಿಬೆಟ್ಟು ಜಯಶ್ರೀ ಅವರ ಮನೆಗೆ ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿ ನೀಡಿ ಧನಸಹಾಯ ಹಸ್ತಾಂತರಿಸಿದರು. ಕಳೆದ ಒಂದು ವರ್ಷದ ಹಿಂದೆ ಜಯಶ್ರೀ ಅವರ ಪತಿ ಅನಾರೋಗ್ಯಕ್ಕೆ ತುತ್ತಾಗಿ ನಿಧನರಾಗಿದ್ದರು. ಹೈನುಗಾರಿಕೆಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದರು. ಬೆಲೆಬಾಳುವ ದನಗಳು ಇತ್ತೀಚೆಗಷ್ಟೇ ಕಳವು ಆಗಿತ್ತು.