ಕಾಸರಗೋಡು, ನ 17 (DaijiworldNews/HR): ಮದ್ರಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ವ್ಯಕ್ತಿಯೋರ್ವ ಮದ್ರಸ ಆವರಣದಲ್ಲೇ ಮೇಲಕ್ಕೆತ್ತಿ ನೆಲಕ್ಕೆ ಎಸೆದ ಅಮಾನವೀಯ ಘಟನೆ ಮಂಜೇಶ್ವರದ ಉದ್ಯಾವರ ಸಮೀಪ ನಡೆದಿದೆ.
ಆರೋಪಿ ಮಂಜೇಶ್ವರ ಕುಂಜತ್ತೂರಿನ ಅಬೂಬಕ್ಕರ್ ಸಿದ್ದಿಕ್ (30) ನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಗುರುವಾರ ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಗಂಭೀರ ಗಾಯಗೊಂಡಿರುವ 9ರ ಹರೆಯದ ಬಾಲಕಿಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮದ್ರಸಕ್ಕೆ ತೆರಳುತ್ತಿದ್ದ ಬಾಲಕಿಯ ಹತ್ತಿರ ಬಂದ ಈತ ಬಾಲಕಿಯನ್ನು ಮೇಲಕ್ಕೆತ್ತಿ ಎಸೆದಿದ್ದು, ಬಾಲಕಿ ನೆಲದಿಂದ ಎದ್ದೇಳಲು ಯತ್ನಿಸಿದರೂ ಪ್ರಜ್ಞೆ ತಪ್ಪಿ ಬಿದ್ದಿದ್ದು, ಕೃತ್ಯದ ಬಳಿಕ ಆರೋಪಿ ಅಲ್ಲಿಂದ ತೆರಳಿದ್ದನು. ಬಾಲಕಿಯ ಸಹಪಾಠಿಗಳ ಕಣ್ಮುಂದೆಯೇ ಈ ಘಟನೆ ನಡೆದಿದೆ.
ಬಾಲಕಿಯ ಪೋಷಕರು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಿಸಿಟಿವಿ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.
ಘಟನೆಯನ್ನು ರಾಜ್ಯ ಸರಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ತಿಳಿಸಿದ್ದಾರೆ.