ಮಂಗಳೂರು, ಫೆ 23(SM): ವಿಜಯ ಬ್ಯಾಂಕ್ ವಿಲೀನ ವಿರೋಧಿಸಿ ಸರ್ವ ಪಕ್ಷಗಳ ಜನಪ್ರತಿನಿಧಿಗಳ ಸಲಹೆ ಸಂಗ್ರಹ ಸಭೆ ನಗರದ ಪುರಭವನದಲ್ಲಿ ಇಂದು ನಡೆಯಿತು. ವಿಜಯ ಬ್ಯಾಂಕ್ ಉಳಿಸಿ ಹೋರಾಟ ಸಮೀತಿ ಸಭೆ ಆಯೋಜನೆ ಮಾಡಿತ್ತು. ಈ ಸಭೆಯಲ್ಲಿ ಮಾಜಿ ಸಚಿವ ರಮಾನಾಥ ರೈ ಹಾಗೂ ಶಾಸಕ ವೇದವ್ಯಾಸ್ ಕಾಮತ್ ನಡುವೆ ವಾಕ್ಸಮರವೇ ನಡೆದಿದೆ.
ಸಭೆಯಲ್ಲಿ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಎಲ್ಲ ಪಕ್ಷದವರನ್ನು ಒಟ್ಟು ಸೇರಿಸಿ ಕೇಂದ್ರಕ್ಕೆ ನಿಯೋಗ ಹೋಗಿ ಮನವಿ ಮಾಡುವ. ಅದನ್ನು ಬಿಟ್ಟು ಕೇಂದ್ರ ಸರಕಾರದ ವಿರುದ್ಧ ಮಾಜಿ ಸಚಿವರು ಗುಡುಗುವುದು ಸರಿಯಲ್ಲ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು. ಅಲ್ಲದೆ ಕೇಂದ್ರಕ್ಕೆ ನಿಯೋಗ ಹೋಗಲು ವಿಮಾನ ಟಿಕೆಟ್ ಮತ್ತು ದಿನ ನಿಗದಿ ಪಡಿಸಿ. ನಿಯೋಗದೊಂದಿಗೆ ತೆರಳಲು ಜಿಲ್ಲೆಯ ೭ ಶಾಸಕರನ್ನು ಕರೆತರುವ ಜವಾಬ್ದಾರಿ ನನ್ನದು ಎಂದರು.
ಈ ವೇಳೆ ಆಕ್ರೋಶಗೊಂಡ ಮಾಜಿ ಸಚಿವ ರಮಾನಾಥ ರೈ, ಎಲ್ಲರನ್ನು ಒಟ್ಟು ಸೇರಿಸುವ ಜವಾಬ್ದಾರಿ ಸಂಸದರದ್ದು ಎಂದಾಗ ಮತ್ತೆ ಮಾತಿನ ಚಕಮಕಿ ಮುಂದುವರೆಯಿತು. ಸಂಸದರಿಗೆ ಪ್ರಯಾಣಕ್ಕೆ ಉಚಿತ ಟಿಕೆಟ್ ದೊರೆಯುತ್ತದೆ. ಅವರೇ ಎಲರನ್ನು ಒಟ್ಟು ಸೇರಿಸಿ ದಿನ ನಿಗದಿ ಪಡಿಸಿ ನಿಯೋಗವನ್ನು ಕೊಂಡೊಯ್ಯಬೇಕು. ಅದು ಸಂಸದರ ಜವಾಬ್ದಾರಿಯಾಗಿದೆ. ಕೇಂದ್ರದಲ್ಲಿ ಸಂಸದರು ವಿಜಯಾಬ್ಯಾಂಕ್ ವಿಲೀನದ ಬಗ್ಗೆ ಧ್ವನಿ ಎತ್ತಬೇಕು ಎಂದು ಖಾರವಾಗಿ ನುಡಿದರು.