ಮಂಗಳೂರು, ನ 17 (DaijiworldNews/DB): ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ವಿಧಿಸುವ ಬಳಕೆದಾರರ ಶುಲ್ಕ ಏರಿಕೆ ಪ್ರಸ್ತಾವಕ್ಕೆ ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ ತಡೆಯೊಡ್ಡಿದೆ. ಮುಂದಿನ ಆದೇಶದವರೆಗೂ ಈಗಿನ ದರವನ್ನೇ ಮುಂದುವರಿಸಲು ಸೂಚಿಸಿದೆ.
ಬಳಕೆದಾರರ ಶುಲ್ಕ ಏರಿಸುವ ಪ್ರಸ್ತಾವ ಬಹು ವರ್ಷಗಳಿಂದಲೇ ಇದ್ದು, ಅದಕ್ಕೆ ಪ್ರಾಧಿಕಾರ ಅನುಮೋದನೆ ನೀಡಿಲ್ಲ. ಅಲ್ಲದೆ ಮುಂದಿನ ಮಾರ್ಚ್ವರೆಗೆ ಅಥವಾ ಮುಂದಿನ ಆದೇಶದವರೆಗೆ ದರವನ್ನು ಯಥಾಪ್ರಕಾರ ಮುಂದುವರಿಸಲು ಸೂಚಿಸಿದೆ. ಹೀಗಾಗಿ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.
ಮಂಗಳೂರು, ಅಹ್ಮದಾಬಾದ್, ಲಕ್ನೋ, ಜೈಪುರ, ಗುವಾಹಟಿ, ತಿರುವನಂತಪುರ ಹಾಗೂ ಶ್ರೀನಗರ ವಿಮಾನ ನಿಲ್ದಾಣಗಳ ಶುಲ್ಕ ಪರಿಷ್ಕರಣೆಗೆ ಪ್ರಸ್ತಾವ ಪ್ರಾಧಿಕಾರದ ಮುಂದಿತ್ತು. ಈ ಪೈಕಿ ಮಂಗಳೂರು, ಅಹ್ಮದಾಬಾದ್, ಲಕ್ನೋ ಹಾಗೂ ಶ್ರೀನಗರ ವಿಮಾನ ನಿಲ್ದಾಣಗಳ ಶುಲ್ಕ ಏರಿಕೆ ಪ್ರಸ್ತಾವದ ಪರಿಶೀಲನೆ ಅಂತಿಮಗೊಂಡಿಲ್ಲದ ಕಾರಣ ಯಥಾಪ್ರಕಾರ ದರ ಮುಂದುವರಿಸಲು ಪ್ರಾಧಿಕಾರ ನಿರ್ದೇಶಿಸಿದೆ.
ಸದ್ಯ 150 ರೂ. ಬಳಕೆದಾರರ ಶುಲ್ಕ ಪಡೆದುಕೊಳ್ಳಲಾಗುತ್ತದೆ. ಈ ನಡುವೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಆಡಳಿತವು ಅದಾನಿ ಸಮೂಹಕ್ಕೆ ಒಳಗೊಂಡ ಬಳಿಕ ದೇಶೀಯ ಪ್ರಯಾಣಿಕರಿಗೆ ಅಕ್ಟೋಬರ್ 1ರಿಂದ ತಲಾ 100 ರೂ. ಬಳಕೆದಾರರ ಶುಲ್ಕ ಏರಿಕೆ ಮಾಡಲು ಅನುಮತಿ ಕೋರಲಾಗಿತ್ತು. ಹಲವು ವರ್ಷಗಳಿಂದಿದ್ದ ಪ್ರಸ್ತಾವದ ಪ್ರಕಾರಈ ದರವನ್ನು 725 ರೂ.ಗಳಿಗೆ ಏರಿಕೆ ಮಾಡುವುದು (ಪ್ರತಿ ವರ್ಷಕ್ಕೊಮ್ಮೆ ಏರಿಕೆ) ಆ ಮೂಲಕ 2026ರ ಮಾರ್ಚ್ 31ರ ವೇಳೆಗೆ 1,200 ರೂ. ಶುಲ್ಕ ವಿಧಿಸುವುದು ಉದ್ದೇಶ.
ಇನ್ನು ಶುಲ್ಕ ಏರಿಕೆ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಅದಾನಿ ಏರ್ಪೋರ್ಟ್ಸ್ ಮಾಹಿತಿ ನೀಡಿದ್ದು, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಮಂಗಳೂರು ವಿಮಾನ ನಿಲ್ದಾಣದಲ್ಲಿ 300 ಕೋಟಿ ರೂ. ಮೌಲ್ಯದ ವಿಸ್ತರಣ ಕಾಮಗಾರಿಯನ್ನು ಮಾಡಲುದ್ದೇಶಿಸಿದ್ದು, ಸದ್ಯ ಅದನ್ನು ಅದಾನಿ ಸಂಸ್ಥೆ ವಹಿಸಿಕೊಂಡಿದೆ. ಅಲ್ಲದೆ 500 ಕೋಟಿ ರೂ. ಮೊತ್ತದ ಅಭಿವೃದ್ದಿ ಕಾಮಗಾರಿಗಳನ್ನು ಹೆಚ್ಚುವರಿಯಾಗಿ ಮುಂದಿನ ಐದು ವರ್ಷಗಳಲ್ಲಿ ಸಂಸ್ಥೆ ನಡೆಸಲಿದೆ. ಸುರಕ್ಷೆ ಮತ್ತು ಆಧುನಿಕ ಸೌಲಭ್ಯಗಳನ್ನು ಪ್ರಯಾಣಿಕರಿಗೆ ಕಲ್ಪಿಸಿಕೊಡುವ ಉದ್ದೇಶವೂ ಸಂಸ್ಥೆ ಮುಂದಿದೆ. ಹೀಗಾಗಿ ಬಳಕೆದಾರರ ಶುಲ್ಕ ಏರಿಕೆ ಪ್ರಸ್ತಾವವನ್ನು ಪ್ರಾಧಿಕಾರದ ಮುಂದಿಡಲಾಗಿದೆ ಎಂದು ತಿಳಿಸಿದೆ.
ಇನ್ನು ಈವರೆಗೆ ಮಂಗಳೂರಿನಿಂದ ತೆರಳುವ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮಾತ್ರ ಶುಲ್ಕ ವಿಧಿಸುತ್ತಿದ್ದರೆ, ನೂತನ ಪ್ರಸ್ತಾವದ ಪ್ರಕಾರ ಮಂಗಳೂರಿಗೆ ಇತರೆಡೆಗಳಿಂದ ಆಗಮಿಸುವವರಿಗೂ ಶುಲ್ಕ ವಿಧಿಸುವ ಚಿಂತನೆಯಿದೆ ಎನ್ನಲಾಗಿದೆ.